ಮಂಡ್ಯ ಐಟಿಐ ತರಬೇತಿ ಅಧಿಕಾರಿ ವಿದ್ಯಾರ್ಥಿಗಳಿಂದ ಲಂಚ ಪಡೆಯುತ್ತಿರುವ ವಿಡಿಯೋ ವೈರಲ್

ಮಂಡ್ಯ: ಸರ್ಕಾರಿ ಐಟಿಐ ಕಾಲೇಜಿನ ತರಬೇತಿ ಅಧಿಕಾರಿ ವಿದ್ಯಾರ್ಥಿಗಳಿಂದ ಲಂಚ ಪಡೆಯುತ್ತಿದ್ದಾರೆಂದು ಆರೋಪಿಸಿ ಯುವಕನೊಬ್ಬ ವಿಡಿಯೋಮಾಡಿ ಫೇಸ್‍ಬುಕ್‍ನಲ್ಲಿ ಅಪ್‍ಲೋಡ್ ಮಾಡಿದ್ದು, ಈಗ ಆ ವಿಡಿಯೋ ಫುಲ್ ವೈರಲ್ ಆಗಿದೆ.

ತಾಲೂಕಿನ ಬಸರಾಳು ಸರ್ಕಾರಿ ಐಟಿಐ ಕಾಲೇಜಿನ ಕಿರಿಯ ತರಬೇತಿ ಅಧಿಕಾರಿ ಸುರೇಶ್ ಕುಮಾರ್, ವಿದ್ಯಾರ್ಥಿಗಳಿಂದ ಕಾಲೇಜಿನಲ್ಲಿ ಟೇಬಲ್ ಮುರಿದಿದೆ ಟೇಬಲ್ ತರಬೇಕು, ಅದಕ್ಕೆ ಬೇಕು ಇದಕ್ಕೆ ಬೇಕು ಎಂದು ಸುಳ್ಳು ಹೇಳಿ ಹಣ ವಸೂಲಿ ಮಾಡಿ ವೈಯಕ್ತಿಕವಾಗಿ ಬಳಸಿಕೊಳ್ಳುತ್ತಿದ್ದರೆಂದು ಆರೋಪಿಸಿ ಮಂಜುನಾಥ್ ಪುನಿ ಎಂಬುವವರು ವಿಡಿಯೋ ಮಾಡಿ ಆ ವಿಡಿಯೋವನ್ನು ಫೇಸ್‍ಬುಕ್‍ಗೆ ಅಪ್‍ಲೋಡ್ ಮಾಡಿದ್ದಾರೆ. ಈ ವಿಡಿಯೋ ಶಿಕ್ಷಣ ಸಚಿವರಿಗೆ ತಲುಪುವವರೆಗೂ ಶೇರ್ ಮಾಡಿ ಎಂದು ಕೇಳಿಕೊಂಡಿದ್ದಾರೆ.

ಫೇಸ್‍ಬುಕ್‍ಗೆ ಅಪ್‍ಲೋಡ್ ಆದ ವಿಡಿಯೋದಲ್ಲಿ, ಸುರೇಶ್ ಕುಮಾರ್ ಕೈಯಲ್ಲಿ ಹಣ ಹಿಡಿದುಕೊಂಡು ಹಣಕಾಸಿನ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಚರ್ಚಿಸುತ್ತಿರುವುದು ಕಾಣಿಸುತ್ತಿದೆ. ಈ ವಿಡಿಯೋವನ್ನು ಮಾಡಿರುವ ಮಂಜುನಾಥ್ ಈ ಹಿಂದೆ ಬಸರಾಳು ಐಟಿಐ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿದ್ದರು ಎಂದು ತಿಳಿದು ಬಂದಿದೆ.

ಸ್ಥಳಿಯರು, ಕೂಡಲೇ ಶಿಕ್ಷಣ ಇಲಾಖೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ಈ ವಿಡಿಯೋ ಬಗ್ಗೆ ಕೇಳಿ ಬಂದಿರುವ ಆರೋಪದ ಬಗ್ಗೆ ಸತ್ಯಾಸತ್ಯತೆ ಪರಿಶೀಲಿಸಬೇಕು. ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

https://youtu.be/z872f7VXQjo

Comments

Leave a Reply

Your email address will not be published. Required fields are marked *