ಮಹಿಳಾ ಮೀಸಲಾತಿ ವಿಚಾರವಾಗಿ ಹೊತ್ತಿ ಉರಿದ ನಾಗಾಲ್ಯಾಂಡ್- ಸರ್ಕಾರಿ ಕಚೇರಿಗಳಿಗೆ ಬೆಂಕಿ

ಕೊಹಿಮಾ: ನಾಗಾಲ್ಯಾಂಡ್‍ನಲ್ಲಿ ಸ್ಥಳೀಯ ಚುನಾವಣೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ನೀಡಿರುವುದನ್ನು ವಿರೋಧಿಸಿ ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.

ಸರ್ಕಾರಿ ಕಚೇರಿಗಳು ವಾಹನಗಳಿಗೆ ಜನ ಬೆಂಕಿಹಚ್ಚಿದ್ದಾರೆ. ಪ್ರತಿಭಟನೆ ಹತ್ತಿಕ್ಕಲು ಪೊಲೀಸರು ಗೋಲಿಬಾರ್ ಮಾಡಿದ್ದು ಎರಡು ದಿನಗಳ ಹಿಂದೆ ಇಬ್ಬರು ನಾಗರೀಕರು ಸಾವನ್ನಪ್ಪಿದ್ದಾರೆ. ನಾಗಾಲ್ಯಾಂಡ್‍ನಲ್ಲಿ ಧೀಮ್‍ಪುರ್‍ನಲ್ಲಿ ಇಂಥದ್ದೊಂದು ದುರ್ಘಟನೆ ನಡೆದುಹೋಗಿದೆ.

ಸಂವಿಧಾನದ ಅನುಸೂಚಿ 371(ಎ) ಅನ್ವಯ ಸಾಂಪ್ರದಾಯಿಕ ಕಾನೂನುಗಳನ್ನು ಅನುಸರಿಸಲು ನಮಗೆ ಹಕ್ಕಿದೆ. ನಮ್ಮ ಕಾನೂನಿನಲ್ಲಿ ಮಹಿಳೆಯರಿಗೆ ಯಾವುದೇ ರಾಜಕೀಯ ಹಕ್ಕು ಕೊಡುವುದಿಲ್ಲ. ಅವರು ಚುನಾವಣೆಗಳಲ್ಲಿ ಭಾಗವಹಿಸಲು ಆಕ್ಷೇಪವಿಲ್ಲ. ಆದರೆ ಯಾವುದೇ ಮೀಸಲಾತಿ ನೀಡಬಾರದು. ಇದರಿಂದ ನಮ್ಮ ಸಾಂವಿಧಾನಿಕ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ ಅಂತ ಬುಡಕಟ್ಟು ಜನಾಂಗದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪುರಸಭೆ ಕಚೇರಿ, ಸಾರಿಗೆ ಕಚೇರಿ, ಡೆಪ್ಯೂಟಿ ಕಮೀಷನರ್ ಕಚೇರಿ, ಪ್ರೆಸ್ ಕ್ಲಬ್, ಸರ್ಕಾರಿ ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ. ಕಳೆದ ಬುಧವಾರ 12 ಟೌನ್‍ಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿದ್ದ ವೇಳೆ ಮಹಿಳೆಯರಿಗೆ ಮೀಸಲಾತಿ ನೀಡುವವರೆಗೂ ಚುನಾವಣೆ ರದ್ದು ಮಾಡಬೇಕು ಅಂತ ಆಗ್ರಹಿಸಿದ್ರು. ಗೋಲಿಬಾರ್ ಖಂಡಿಸಿ ಸಿಎಂ ಟಿ.ಆರ್.ಜೀಲಿಯಾಂಗ್ ಗುರುವಾರ ಸಂಜೆ 4 ಗಂಟೆಯೊಳಗೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದರು. ಸಿಎಂ ರಾಜೀನಾಮೆ ನೀಡದ ಕಾರಣ ಗುರುವಾರ ರಾತ್ರಿ ಇದ್ದಕ್ಕಿದ್ದಂತೆ ಬೀದಿಗಿಳಿದ ಪ್ರತಿಭಟನಕಾರರು ರೊಚ್ಚಿಗೆದ್ದು ಸರ್ಕಾರಿ ಕಚೇರಿಗಳಿಗೆ ಬೆಂಕಿ ಹಾಕಿದ್ದಾರೆ.

ಇದ್ರಿಂದ 2 ತಿಂಗಳ ಮಟ್ಟಿಗೆ ಚುನಾವಣೆಯನ್ನ ಸರ್ಕಾರ ಮುಂದೂಡಿದೆ. ಪರಿಸ್ಥಿತಿ ನಿಯಂತ್ರಿಸಲು ಸೇನಾಪಡೆಗಳನ್ನ ನಿಯೋಜಿಸಲಾಗಿದೆ.

Comments

Leave a Reply

Your email address will not be published. Required fields are marked *