ಲಡಾಖ್ ಕ್ರಿಕೆಟಿಗರು ಕಾಶ್ಮೀರ ತಂಡವನ್ನ ಪ್ರತಿನಿಧಿಸಲಿದ್ದಾರೆ: ವಿನೋದ್ ರಾಯ್

ನವದೆಹಲಿ: ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆ ಆಗಿರುವ ಲಡಾಖ್ ಪ್ರದೇಶದ ಕ್ರಿಕೆಟಿಗರು ರಣಜಿ ಟೂರ್ನಿಯಲ್ಲಿ ಜಮ್ಮು ಕಾಶ್ಮೀರ ತಂಡವನ್ನು ಪ್ರತಿನಿಧಿಸುತ್ತಾರೆ ಎಂದು ಸುಪ್ರೀಂ ನೇಮಿತ ಬಿಸಿಸಿಐ ಆಡಳಿತ ಸಮಿತಿ ಮುಖ್ಯಸ್ಥ ವಿನೋದ್ ರಾಯ್  ಸ್ಪಷ್ಟನೆ ನೀಡಿದ್ದಾರೆ.

ಇದುವರೆಗೂ ಲಡಾಖ್ ಪ್ರದೇಶಕ್ಕೆ ಸೇರಿರುವ ಯಾವುದೇ ಆಟಗಾರ ಕೂಡ ಕಾಶ್ಮೀರ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿಲ್ಲ. ಆದ್ದರಿಂದ ಈ ಪ್ರದೇಶಕ್ಕೆ ಸೇರಿದ ಆಟಗಾರರು ದೇಶಿಯ ಕ್ರಿಕೆಟ್ ಟೂರ್ನಿಗಳಲ್ಲಿ ಕಾಶ್ಮೀರ ಪರ ಆಡುತ್ತಾರೆ ಎಂದು ವಿನೋದ್ ರಾಯ್ ಹೇಳಿದ್ದಾರೆ.

ಈಗಾಗಲೇ ಕೇಂದ್ರಾಡಳಿತ ಪ್ರದೇಶವಾಗಿರುವ ಛತ್ತಿಸ್‍ಗಢ ಪ್ರದೇಶದ ಆಟಗಾರರು ಹರಿಯಾಣ ಹಾಗೂ ಪಂಜಾಬ್ ತಂಡದ ಪರ ಆಡುತ್ತಿದ್ದಾರೆ. ಆದರಂತೆ ಲಡಾಖ್ ಪ್ರದೇಶದ ಆಟಗಾರರು ಜಮ್ಮು ಕಾಶ್ಮೀರ ತಂಡದ ಪರವೇ ಆಡಲಿದ್ದಾರೆ ಎಂದಿದ್ದಾರೆ. ಇದೇ ವೇಳೆ ಇದುವರೆಗೂ ಶ್ರೀನಗರದಲ್ಲಿ ನಡೆಯುತ್ತಿದ್ದ ಕಾಶ್ಮೀರದ ರಣಜಿ ಪಂದ್ಯಗಳನ್ನು ಅಲ್ಲಿಂದ ಬದಲಾವಣೆ ಮಾಡುವ ಯೋಚನೆ ಮಾಡಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಜಮ್ಮು ಕಾಶ್ಮೀರವನ್ನು ವಿಭಜನೆ ಮಾಡಿ ಆದೇಶ ನೀಡಿದ ಬಳಿಕ ಲಡಾಖ್ ಕ್ರಿಕೆಟ್ ಆಟಗಾರರ ಭವಿಷ್ಯ ಕುರಿತು ಬಿಸಿಸಿಐ ಚರ್ಚೆ ನಡೆಸಿ ಈ ನಿರ್ಧಾರ ಕೈಗೊಂಡಿದೆ. ಅಲ್ಲದೇ ಲಡಾಖ್ ಹಾಗೂ ಜಮ್ಮು ಕಾಶ್ಮೀರಕ್ಕೆ ಬೇರೆ ಬೇರೆ ಬೋರ್ಡ್ ಸ್ಥಾಪನೆ ಬೇಡ ಎಂದು ನಿರ್ಧರಿಸಿ ಕಾಶ್ಮೀರ ತಂಡವನ್ನು ಪ್ರತಿನಿಧಿಸಲು ಅವಕಾಶ ನೀಡಿದೆ. ಬಿಸಿಸಿಐ ಆಯೋಜಿಸುವ ಈ ಸಾಲಿನ ರಣಜಿ ಕ್ರಿಕೆಟ್ ಟೂರ್ನಿಗಳು ಮುಂದಿನ ಡಿಸೆಂಬರ್ ನಿಂದ ಆರಂಭವಾಗಲಿದೆ.

ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ಕಾರಣದಿಂದ ಅಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ ಕೇಂದ್ರ ಸರ್ಕಾರದ ಘೋಷಣೆ ಮಾಡುವ ಮೊದಲೇ ಕಣಿವೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಕಾಶ್ಮೀರವನ್ನು ಬಿಟ್ಟು ತೆರಳುವಂತೆ ಟೀಂ ಇಂಡಿಯಾ ಕ್ರಿಕೆಟರ್ ಇರ್ಫಾನ್ ಪಠಾಣ್ ಸೇರಿದಂತೆ 100 ಮಂದಿ ಕ್ರಿಕೆಟಿಗರಿಗೆ ಸೂಚನೆ ನೀಡಲಾಗಿತ್ತು. ಜಮ್ಮು ಮತ್ತು ಕಾಶ್ಮೀರ ರಣಜಿ ತಂಡದ ಆಟಗಾರ ಹಾಗೂ ಮೆಂಟರ್ ಆಗಿ ಇರ್ಫಾನ್ ಪಠಾಣ್ ಕಾರ್ಯನಿರ್ವಹಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *