ಮುಂಬೈ: ಖ್ಯಾತ ಬಾಲಿವುಡ್ ನಟ ಹಾಗೂ ರಾಜಕಾರಣಿ ವಿನೋದ್ ಖನ್ನಾ(70) ವಿಧಿವಶರಾಗಿದ್ದಾರೆ.
ಕೆಲವು ವಾರಗಳ ಹಿಂದೆ ತೀವ್ರ ನಿರ್ಜಲೀಕರಣದ ಕಾರಣ ಖನ್ನಾ ಅವರನ್ನ ಗಿರ್‍ಗಾಂವ್‍ನ ಹೆಚ್‍ಎನ್ ರಿಲಯನ್ಸ್ ಫೌಂಡೇಷನ್ ಅಂಡ್ ರಿಸರ್ಚ್ ಸೆಂಟರ್‍ಗೆ ಕರೆದೊಯ್ಯಲಾಗಿತ್ತು. ಅವರಿಗೆ ಬ್ಲಾಡರ್ ಕ್ಯಾನ್ಸರ್‍ಗೆ ಚಿಕಿತ್ಸೆ ನೀಡಲಾಗ್ತಿದೆ ಎಂಬ ವದಂತಿಯೂ ಹಬ್ಬಿತ್ತು. ಇದಾದ ಕೆಲವು ದಿನಗಳ ಬಳಿಕ ವಿನೋದ್ ಖನ್ನಾ ಅವರ ಮಗ ರಾಹುಲ್ ಖನ್ನಾ ಸುದ್ದಿ ಸಂಸ್ಥೆಗೆ ಹೇಳಿಕೆ ನೀಡಿದ್ದು, ತೀವ್ರ ನಿರ್ಜಲೀಕರಣದಿಂದಾಗಿ ತಂದೆಯನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ. ವೈದ್ಯರು ಚಿಕಿತ್ಸೆ ನೀಡಿದ್ದು, ಶೀಘ್ರದಲ್ಲೇ ಡಿಸ್ಚಾರ್ಜ್ ಮಾಡಿಸಲಾಗುತ್ತದೆ ಎಂದು ಹೇಳಿದ್ದರು.

1968ರಲ್ಲಿ ಮನ್ ಕಾ ಮೀತ್ ಚಿತ್ರದ ಮೂಲಕ ವಿನೋದ್ ಖನ್ನಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಈ ಚಿತ್ರದಲ್ಲಿ ಸುನಿಲ್ ದತ್ತ ಅವರಿಗೆ ಖಳನಾಯಕರಾಗಿ ಅಭಿನಯಿಸಿದ್ದರು. ನಂತರ ಹಲವಾರು ಚಿತ್ರಗಳಲ್ಲಿ ಖಳನಾಯಕ ಹಾಗು ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ರು. ಹಮ್ ತುಮ್ ಔರ್ ವೋ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ರು. ಅಮರ್ ಅಕ್ಬರ್ ಆಂಟೋನಿ, ಪರ್ವರಿಷ್, ಹೇರಾ ಫೇರಿ, ಮುಖ್ದಾರ್ ಕಾ ಸಿಕಂದರ್ ಇನ್ನೂ ಮುಂತಾದ ಫೇಮಸ್ ಚಿತ್ರಗಳಲ್ಲಿ ಖನ್ನಾ ಅಭಿನಯಿಸಿದ್ದಾರೆ.
ಇತ್ತೀಚೆಗೆ ಸಲ್ಮಾನ್ ಖಾನ್ ಅಭಿನಯದ ದಬಂಗ್ ಚಿತ್ರದಲ್ಲೂ ವಿನೋದ್ ಖನ್ನಾ ಕಾಣಿಸಿಕೊಂಡಿದ್ದರು. ಅವರು ಅಭಿನಯಿಸಿದ ಕೊನೆಯ ಚಿತ್ರ ಶಾರೂಖ್ ಖಾನ್ ಹಾಗೂ ಕಾಜೋಲ್ ಅಭಿನಯದ ದಿಲ್‍ವಾಲೆ.
ನಟರಾಗಿ ಅಷ್ಟೇ ಅಲ್ಲದೆ ರಾಜಕಾರಣಿಯಾಗಿಯೂ ವಿನೋದ್ ಖನ್ನಾ ಗುರುತಿಸಿಕೊಂಡಿದ್ದರು. ಪಂಜಾಬ್‍ನ ಗುರುದಾಸ್‍ಪುರ ಕ್ಷೇತ್ರದಿಂದ ಬಿಜೆಪಿ ಸಂಸದರಾಗಿ ಆಯ್ಕೆಯಾಗಿದ್ದರು. ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಹಾಗೂ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಾಗಿದ್ರು.



Leave a Reply