ನಾಗಮಂಡಲ, ಭೂತಾರಾಧನೆಯ ಕುರಿತು ಹೇಳಿಕೆ – ವಿನಯ್ ಗುರೂಜಿ ವಿರುದ್ಧ ಕರಾವಳಿಯಲ್ಲಿ ಆಕ್ರೋಶ

ಮಂಗಳೂರು: ಭೂತಾರಾಧನೆ ಮತ್ತು ನಾಗಾರಾಧನೆ ಕರಾವಳಿ ಜನರು ಆರಾಧಿಸುವ ಭಕ್ತಿಯ ಆಚರಣೆ. ಆದರೆ ಚಿಕ್ಕಮಗಳೂರು ಮೂಲದ ಅವಧೂತ ವಿನಯ್ ಗುರೂಜಿ, ನಾಗಾರಾಧನೆ ಮತ್ತು ಭೂತಾರಾಧನೆಯನ್ನು ಅವಹೇಳನಗೈದು ಮಾತನಾಡಿದ್ದು, ಈಗ ವಿವಾದಕ್ಕೆ ಕಾರಣವಾಗಿದೆ.

ಕರಾವಳಿಯ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ವಿನಯ್ ಗುರೂಜಿ, ಇನ್ನೊಬ್ಬರಿಗೆ ಅಡ್ಡ ಬೀಳಬೇಕಾದರೆ (ಕಾಲಿಗೆ ಬೀಳಬೇಕಾದರೆ) ಯಾಕೆ ಬೀಳಬೇಕು? ಅವನು ಏನು? ನಾನು ಏನು? ಎಂದು ಯೋಜನೆ ಮಾಡಿ. ಪೂಜೆ ಎಂದರೆ ಏನು? ಏಕೆ ಪೂಜೆ ಮಾಡಬೇಕು? ಅದರಿಂದ ಏನಾಗುತ್ತದೆ ಎಂದು ತಿಳಿದುಕೊಂಡು ಪೂಜೆ ಮಾಡಿ. ನಾಗಮಂಡಲಕ್ಕಾಗಿ ಕೆಲವರು 2- 3 ಕೋಟಿ ರೂ. ಖರ್ಚು ಮಾಡುತ್ತಾರೆ. ನಾಗಮಂಡಲಕ್ಕೆ ಮಾಡುವ ಕೋಟಿ ಕೋಟಿ ಖರ್ಚಿನಲ್ಲಿ ಒಳ್ಳೆಯ ರಸ್ತೆ ಮಾಡಬಹುದು ಎಂದು ಹೇಳಿದ್ದಾರೆ.

ತುಳುನಾಡಿನ ಭೂತಗಳು ಬ್ರಾಹ್ಮಣರ ಮನೆಯಲ್ಲಿ ಇಡ್ಲಿ ಸಾಂಬಾರ್ ಸ್ವೀಕರಿಸಿದರೆ, ಶೆಟ್ರ ಮನೆಯಲ್ಲಿ ಕೋಳಿ ಸ್ವೀಕಾರ ಮಾಡುತ್ತದೆ. ಇದೇನು ಭೂತಗಳಲ್ಲೂ ವೈರುಧ್ಯ, ತಾರತಮ್ಯ ಇದೆಯೇ? ದೇವರಿರುವುದು ನಮ್ಮಲ್ಲಿ ಶ್ರದ್ಧೆ ತರಿಸಲು ಹೊರತು ಅಂಧ ವಿಶ್ವಾಸಗಳಿಗಲ್ಲ ಎಂದು ವ್ಯಂಗ್ಯವಾಡಿದ್ದಾರೆ. ವಿನಯ್ ಗುರೂಜಿಯ ಈ ಮಾತುಗಳ ಬಗ್ಗೆ ಕರಾವಳಿಯಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗುತ್ತಿದೆ.

ಹಿಂದಿನಿಂದ ನಡೆಸಿಕೊಂಡು ಬಂದಿರುವ ಆಚರಣೆಗಳಿಗೆ ನನ್ನ ನಮಸ್ಕಾರ. ಆದರೆ ಅದನ್ನು ಇಟ್ಟುಕೊಂಡು ವ್ಯಾಪಾರ ಮಾಡಬಾರದು. ಯಾರ ಕಣ್ಣು ಬೇಕಾದರೂ ಮುಚ್ಚಿಸಬಹುದು. ಆದರೆ ಭಗವಂತನ ಕಣ್ಣು ಮುಚ್ಚಿಸಲು ಸಾಧ್ಯವಿಲ್ಲ. ಸೃಷ್ಟಿ ಇರುವುದು ಎಷ್ಟು ಸತ್ಯವೋ ಅದೇ ರೀತಿ ಸೃಷ್ಟಿಕರ್ತ ಇರುವುದು ಅಷ್ಟೇ ಸತ್ಯ ಎಚ್ಚರವಾಗಿರಿ ಎಂದರು.

ನಾಗಪಾತ್ರಿಗಳು ಮುಖಕ್ಕೆ ಹಿಂಗಾರ ಲೇಪಿಸಿಕೊಂಡು ಹೊರಳಾಡುತ್ತಾರೆ. ಅದನ್ನು ನೋಡಲು ಒಂದು ಜನರ ಗುಂಪು. ಆ ಹಿಂಗಾರ ಬೆಳೆಯಲು ರೈತ ಆರು ತಿಂಗಳ ಕಾಲ ಬೆವರು ಹರಿಸುತ್ತಾನೆ. ನಾಗಪಾತ್ರಿಗಳಿಗೆ ಇಷ್ಟಿಷ್ಟು ಚಿನ್ನ ಹಾಕಬೇಕೆಂದು ಯಾವ ಸುಬ್ರಹ್ಮಣ್ಯ ಬಂದು ಹೇಳಿದ್ದಾನೆ. ಅರುಣಾಚಲ ಪ್ರದೇಶಕ್ಕೆ ರಮಣ ಮಹರ್ಷಿಯಾಗಿ ಸುಬ್ರಹ್ಮಣ್ಯ ಬಂದಿದ್ದ. ಆದರೆ ಆತ ಲಂಗೋಟಿ ಹಾಕಿಕೊಂಡು ಬಂದಿದ್ದನು. ಅವನ ಹೆಸರು ಹೇಳಿಕೊಂಡು ನಾಟಕವಾಡಿದರೆ ಸರಿಯಿರಲ್ಲ. ಇದು ನನ್ನ ವಾರ್ನಿಂಗ್ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *