ನೀರಿನ ದರೋಡೆ ತಪ್ಪಿಸಲು ಗ್ರಾಮಸ್ಥರಿಂದ ಡ್ರಮ್‍ಗಳಿಗೆ ಬೀಗ!

ಜೈಪುರ: ಭಾರತದ ಹಲವು ರಾಜ್ಯಗಳಲ್ಲಿ ನೀರಿನ ಸಮಸ್ಯೆ ಅಧಿಕವಾಗಿದ್ದು, ರಾಜಸ್ಥಾನದ ಹಲವು ಗ್ರಾಮಗಳಲ್ಲಿ ಸಂಗ್ರಹಿಸಿರುವ ನೀರಿನ ದರೋಡೆ ತಪ್ಪಿಸಲು ಅಲ್ಲಿನ ಗ್ರಾಮಸ್ಥರು ಡ್ರಮ್ ಗಳಿಗೆ ಬೀಗ ಹಾಕಿ ರಕ್ಷಣೆ ಮಾಡುತ್ತಿದ್ದಾರೆ.

ರಾಜಸ್ಥಾನದ ಹಲವು ಪ್ರದೇಶಗಳಲ್ಲಿ ಬಿಸಿಲಿನ ತಾಪಮಾನ 45 ಡಿಗ್ರಿ ದಾಟಿದ್ದು, ನೀರಿನ ಕೊರತೆ ಅಧಿಕವಾಗಿದೆ. ಈ ವೇಳೆ ತಮ್ಮ ಮನೆ ಅಂಗಳದಲ್ಲಿ ಸಂಗ್ರಹಿಸಿರುವ ನೀರನ್ನು ರಕ್ಷಿಸಿಕೊಳ್ಳುವುದು ಮತ್ತೊಂದು ಸಮಸ್ಯೆಯಾಗಿದ್ದು, ಅದಕ್ಕಾಗಿ ಹಲವು ಗ್ರಾಮಗಳಲ್ಲಿ ಡ್ರಮ್ ಗಳಿಗೆ ಬೀಗ ಹಾಕಿರುವ ದೃಶ್ಯಗಳು ಕಾಣಸಿಗುತ್ತದೆ.

ಸ್ಥಳೀಯ ಪರಸರಾಂಪುರ ಗ್ರಾಮಕ್ಕೆ ವಾರಕ್ಕೆ ಒಮ್ಮೆ ಮಾತ್ರ ನೀರನ್ನು ಹಿಂದೂಸ್ತಾನ್ ಜಿಂಕ್ ಲಿಮಿಟೆಡ್ ಸಂಸ್ಥೆ ಪೂರೈಸುತ್ತಿದ್ದು, ಈ ನೀರನ್ನು ಸಹ ದರೋಡೆಕೋರರು ಲೂಟಿ ಮಾಡುತ್ತಿರುವ ಪ್ರಕರಣಗಳು ಹೆಚ್ಚಿದೆ. ಅದ್ದರಿಂದ ಮನೆ ಹೊರಾಂಗಣದಲ್ಲಿರುವ ಡ್ರಮ್ ಗಳಿಗೆ ಬೀಗ ಹಾಕಿ ನೀರನ್ನು ರಕ್ಷಣೆ ಮಾಡುತ್ತಿರುವುದಾಗಿ ಸ್ಥಳೀಯ ಮಾಧ್ಯಮವೊಂದಕ್ಕೆ ಗ್ರಾಮಸ್ಥರು ತಿಳಿಸಿದ್ದಾರೆ.

ಯಾವ ಸಮಯದಲ್ಲಿ ಬಂದು ಕಳ್ಳತನ ಮಾಡುತ್ತಾರೆ ಎಂನ್ನುವುದರ ಬಗ್ಗೆ ಖಚಿತ ಮಾಹಿತಿ ಇಲ್ಲ. ಹಲವು ವೇಳೆ ರಾತ್ರಿ ಸಮಯದಲ್ಲಿ ದರೋಡೆಕೋರರು ಬಂದು ನೀರನ್ನು ಲೂಟಿ ಮಾಡಿದ್ದಾರೆ. ಇದರಿಂದ ಕುಡಿಯಲು ನೀರಲ್ಲದೆ ಸಮಸ್ಯೆ ಎದುರಿಸಬೇಕಾಗುತ್ತದೆ. ಕಳ್ಳತನವಾಗದೇ ಇರಲು ಈ ಮಾರ್ಗ ಕಂಡುಕೊಂಡಿರುವುದಾಗಿ ಮತ್ತೊಬ್ಬ ಗ್ರಾಮಸ್ಥರು ತಿಳಿಸಿದ್ದಾರೆ.

ಸ್ಥಳೀಯ ಪಂಚಾಯಿತಿ ನೀರಿನ ಮಿತ ಬಳಕೆಗೆ ಸಲಹೆ ನೀಡಿದೆ. ಹಲವರು ನೀರಿಗಾಗಿ ಹೋರಾಟ ಮಾಡುತ್ತಾರೆ. ಮೂರು ದಿನಕ್ಕೆ ಒಮ್ಮೆಯಾದರೂ ನೀರು ಪೂರೈಕೆ ಮಾಡಬೇಕು ಎಂದು ಗ್ರಾಮದ ಮಹಿಳೆ ತಿಳಿಸಿದ್ದಾಗಿ ವರದಿಯಾಗಿದೆ. ಇನ್ನು ಮಧ್ಯಪ್ರದೇಶ, ಉತ್ತರಾಖಂಡ, ಛತ್ತೀಸ್‍ಗಢ ರಾಜ್ಯಗಳ ಹಲವು ಪ್ರದೇಶಗಳಲ್ಲೂ ಇದೇ ಪರಿಸ್ಥಿತಿ ಇರುವುದಾಗಿ ವರದಿಯಾಗಿದೆ.

Comments

Leave a Reply

Your email address will not be published. Required fields are marked *