ಮಳೆಯ ಆರ್ಭಟವನ್ನೂ ಲೆಕ್ಕಿಸದೇ ಕಂಬವನ್ನು ಹೊತ್ತೊಯ್ದು ಗ್ರಾಮಕ್ಕೆ ಬೆಳಕು ತಂದ ಗ್ರಾಮಸ್ಥರು!

ಕಾರವಾರ: ಹಳ್ಳದಲ್ಲಿ ಎದೆ ಮಟ್ಟದ ನೀರು ಹರಿಯುತ್ತಿದ್ದರೂ, ಊರಿನ ಕತ್ತಲು ಓಡಿಸಲು ಮಳೆಯ ಆರ್ಭಟವನ್ನೂ ಲೆಕ್ಕಿಸದೇ ಗ್ರಾಮಸ್ಥರು ಜೀವದ ಹಂಗು ತೊರೆದು ತುಂಬಿ ಹರಿಯುತ್ತಿದ್ದ ಹೊಳೆಯ ನೀರಿನಲ್ಲೇ ಕಂಬವನ್ನು ಹೊತ್ತೊಯ್ದು ಗ್ರಾಮಕ್ಕೆ ಬೆಳಕು ತಂದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನಲ್ಲಿ ನಡೆದಿದೆ.

ಅಂಕೋಲ ತಾಲೂಕಿನ ಕಟ್ಟಿನಕಲು ಗ್ರಾಮದ ಕೋಟೇಪಾಲ್, ಕುಣಬೇರಕೇರಿ, ಬೇರೂಳ್ಳಿ, ಮತಿನಮತ್ತಿಯ ಸುತ್ತಮುತ್ತಲ ಗ್ರಾಮದಲ್ಲಿ ಕಳೆದ 8 ದಿನಗಳಿಂದ ಮಳೆಗೆ ಕಂಬದ ಮೇಲೆ ಮರ ಉರುಳಿ ವಿದ್ಯುತ್ ವ್ಯತ್ಯಯವಾಗಿತ್ತು. ಹೆಸ್ಕಾಂಗೆ ಈ ಬಗ್ಗೆ ದೂರು ನೀಡಿದರೂ ಅಧಿಕಾರಿಗಳು ಮಾತ್ರ ಸ್ಪಂದಿಸಲಿಲ್ಲ.

8 ದಿನಗಳಿಂದ ಕತ್ತಲಲ್ಲಿದ್ದ ಜನರು ಹೆಸ್ಕಾಂ ಅಧಿಕಾರಿಗಳ ಧೋರಣೆಗೆ ಬೇಸತ್ತು ಊರ ಜನರೇ ಮುರಿದು ಹೋದ ಕಂಬಗಳನ್ನು ಹೊಸದಾಗಿ ಹಾಕುವ ಕೆಲಸಕ್ಕೆ ಕೈ ಹಾಕಿದ್ದಾರೆ. ರಭಸವಾಗಿ ಎದೆ ಮಟ್ಟಕ್ಕೆ ಹರಿಯುತಿದ್ದ ಹಳ್ಳದಲ್ಲಿಯೇ ರಾಷ್ಟ್ರೀಯ ಹೆದ್ದಾರಿ 63 ರಿಂದ ಮೂರು ಕಿ.ಮೀ ದೂರವಿರುವ ಹಿರಿಹಳ್ಳದ ಮೂಲಕ ಕಂಬಗಳನ್ನು ತಮ್ಮ ಗ್ರಾಮಕ್ಕೆ ಹೊತ್ತೂಯ್ದಿದಾರೆ.

ಕಂಬಗಳು ಮುರಿದ ಜಾಗದಲ್ಲಿ ನೆಟ್ಟು ತಮ್ಮ ಗ್ರಾಮಗಳಿಗೆ ಬೆಳಕು ತಂದಿದ್ದಾರೆ. ಕಳೆದ ಹಲವು ವರ್ಷಗಳಿಂದ ಮಳೆಗಾಲದಲ್ಲಿ ಈ ಗ್ರಾಮ ಹಿರಿಹಳ್ಳದಿಂದಾಗಿ ದ್ವೀಪದಂತಾಗುತ್ತದೆ. ಹೀಗಾಗಿ ಈ ಗ್ರಾಮಕ್ಕೆ ಹಲವು ವರ್ಷಗಳಿಂದ ಸೇತುವೆ ಇಲ್ಲದೇ ಹಳ್ಳದಲ್ಲೇ ನಡೆದುಕೊಂಡು ಹೋಗುವ ಸ್ಥಿತಿಯಿದ್ದು ತಮಗೊಂದು ಸೇತುವೆಯಾಗಬೇಕೆಂಬುದು ಊರಿನ ಜನರು ಬಹಳ ವರ್ಷಗಳಿಂದ ಬೇಡಿಕೆ ಇಟ್ಟಿದ್ದಾರೆ. ಆದರೆ ಈ ಬೇಡಿಕೆ ಇನ್ನೂ ಈಡೇರದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *