ಶಾಲೆಗೆ ನುಗ್ಗಿ ಮಹಿಳಾ ಅಡುಗೆ ಸಹಾಯಕರನ್ನು ಹೊರಗೆ ಎಳೆದು ಗ್ರಾಮಸ್ಥರಿಂದ ಹಲ್ಲೆ

ಮೈಸೂರು: ಮೂವರು ಮಹಿಳಾ ಅಡುಗೆ ಕೆಲಸಗಾರರಿಗೆ ಊರಿನ ಮುಖಂಡರು ತಮ್ಮ ಮಾತು ಕೇಳದೆ ಇದ್ದಿದ್ದಕ್ಕೆ ಕಿರುಕುಳ ನೀಡಿರುವ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ ಕೋಟೆಯಲ್ಲಿ ನಡೆದಿದೆ.

ಸವ್ವೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಮಂಜುಳಾ, ದೇವಮ್ಮ, ಸಿದ್ದಮ್ಮ ಕಿರುಕುಳಕ್ಕೆ ಒಳಗಾದ ಮಹಿಳೆಯರು. ಶಾಲೆಯ ಆಂತರಿಕ ವಿಚಾರಕ್ಕೆ ಗ್ರಾಮದ ಮುಖಂಡರು ತಲೆ ಹಾಕಿದ್ದರು. ಇದರಿಂದಾಗಿ ಮೂವರು ಅಡುಗೆಯವರು ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮಹಿಳೆಯರು ನಮ್ಮ ಶಾಲೆಯ ವಿಚಾರಕ್ಕೆ ಬರದಂತೆ ಮನವಿ ಕೂಡ ಮಾಡಿಕೊಂಡಿದ್ದರು. ಇದರಿಂದ ಆಕ್ರೋಶಗೊಂಡು ಗ್ರಾಮದ ಮುಖಂಡರು ಈ ಕೃತ್ಯವನ್ನು ಎಸಗಿದ್ದಾರೆ.

ಮಂಗಳವಾರ ಶಾಲೆಗೆ ನುಗ್ಗಿ ಗಲಾಟೆ ನಡೆಸಿರುವ ಕೆಲ ಗ್ರಾಮಸ್ಥರು ಅಡುಗೆ ಮಾಡುತ್ತಿದ್ದ ಮೂವರು ಅಡುಗೆಯವರನ್ನು ಶಾಲೆಯಿಂದ ಹೊರ ಹಾಕಿದ್ದಾರೆ. ಹೊರಗೆ ಎಳೆದು ತಂದು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲದೇ ಮೂವರಿಗೂ ಗ್ರಾಮಸ್ಥರು ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ.

ಬೆಂಕಿ ಬಿಸಿನೀರು ಕೊಡದಂತೆ ಬಹಿರಂಗವಾಗಿ ಹೇಳಿಕೆ ನೀಡಿದ್ದು, ಈ ಎಲ್ಲಾ ದೃಶ್ಯಗಳು ಮೊಬೈಲ್‍ನಲ್ಲಿ ರೆಕಾರ್ಡ್ ಆಗಿದೆ. ಸದ್ಯಕ್ಕೆ ಅಡುಗೆ ತಯಾರಕರನ್ನು ಹೆಚ್.ಡಿ ಕೋಟೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಹೆಚ್.ಡಿ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *