ಭರವಸೆ ಈಡೇರಿಸದೆ ಬಂದ ಶಾಸಕರೆದುರೇ ಮತದಾನ ಬಹಿಷ್ಕಾರ ಘೋಷಣೆ ಮಾಡಿದ ಗ್ರಾಮಸ್ಥರು!

ಹಾಸನ: ಕೊಟ್ಟ ಭರವಸೆ ಈಡೇರಿಸದೆ ಮತ್ತೆ ಗ್ರಾಮಕ್ಕೆ ಬಂದ ಶಾಸಕರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡು ಬೆವರು ಇಳಿಸಿದ್ದಾರೆ. ಅಲ್ಲದೆ ಮತದಾನ ಬಹಿಷ್ಕರಿಸುವುದಾಗಿ ಶಾಸಕರ ಎದರೇ ಘೋಷಣೆ ಕೂಗಿದ್ದಾರೆ.

ಈ ಘಟನೆ ಹಾಸನದ ಸಕಲೇಶಪುರ ತಾಲೂಕಿನ ಅತ್ತಿಹಳ್ಳಿಯಲ್ಲಿ ನಡೆದಿದೆ. ಕ್ಷೇತ್ರದ ಶಾಸಕ ಹೆಚ್.ಕೆ.ಕುಮಾರ್ ಸ್ವಾಮಿ ಗ್ರಾಮದಲ್ಲಿ ಸುಗ್ಗಿಹಬ್ಬ ಇರೋದ್ರಿಂದ ಭೇಟಿ ನೀಡಿದ್ದರು. ಆದ್ರೆ ಈ ಸಂದರ್ಭವನ್ನು ಉಪಯೋಗಿಸಿದ ಗ್ರಾಮಸ್ಥರು ಮೂಲಭೂತ ಸೌಕರ್ಯಗಳನ್ನು ನೀಡದೆ ಇರುವ ಬಗ್ಗೆ ಶಾಸಕರಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ರು.

ಗ್ರಾಮಸ್ಥರ ಈ ರೀತಿಯ ಸಿಟ್ಟಿನಿಂದ ಹೈರಾಣಾದಂತೆ ಕಂಡ ಶಾಸಕರು ಕೊಂಚ ಸಮಾಧಾನಪಡಿಸುವ ಯತ್ನ ಮಾಡಿದರೂ ಪ್ರಯೋಜನ ಆಗಲಿಲ್ಲ. ಗ್ರಾಮಸ್ಥರು ಮತದಾನ ಬಹಿಷ್ಕಾರದ ಘೋಷಣೆಗಳನ್ನು ಕೂಗಿದರು. ಸಕಲೇಶಪುರ ಆಲೂರು ಮೀಸಲು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಈ ಗ್ರಾಮದಲ್ಲಿ ಕಳೆದ 10 ವರ್ಷಗಳಿಂದ ಒಮ್ಮೆ ಮಾತ್ರ ಅಭಿವೃದ್ಧಿ ಕಂಡಿದೆ.

ಗ್ರಾಮಕ್ಕೆ ಸರಿಯಾದ ಕುಡಯುವ ನೀರಿಲ್ಲ. ಆಸ್ಪತ್ರೆ, ಪಶು ಆಸ್ಪತ್ರೆ ಇದೆ ಆದ್ರೆ ವೈದ್ಯರಿಲ್ಲ. ಶಾಲೆ ಇದೆ ಆದ್ರೆ ಮುರಿದ ಕಟ್ಟಡಗಳು. ಹೀಗೆ ಹಲವು ಸಮಸ್ಯೆಗಳು ಗ್ರಾಮದಲ್ಲಿವೆ. ಆದ್ರೆ ಶಾಸಕರು ನೆಪಕ್ಕೆ ಮಾತ್ರ ಆಶ್ವಾಸನೆ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕರು ನಾನು ಅಭಿವೃದ್ಧಿ ಮಾಡಿದ್ದೇನೆ. ಆದ್ರೆ ಸರ್ಕಾರದ ಅನುದಾನ ನನ್ನ ಕ್ಷೇತ್ರಕ್ಕೆ ಸಾಲುತಿಲ್ಲ ಎಂದು ಹೇಳಿ ಕೈಚೆಲ್ಲಿದ್ದಾರೆ. ಒಟ್ಟಿನಲ್ಲಿ ಅತ್ತಿಹಳ್ಳಿ ಗ್ರಾಮಸ್ಥರ ಆಕ್ರೋಶದಿಂದ ಪೇಚಿಗೆ ಸಿಲುಕಿದ ಶಾಸಕರು ಅಲ್ಲಿಂದ ವಾಪಸ್ಸಾದ್ರು.

Comments

Leave a Reply

Your email address will not be published. Required fields are marked *