ಸಂಸದ ರಾಜೀವ್ ಚಂದ್ರಶೇಖರ್ ಮಾಲೀಕತ್ವದ ರೆಸಾರ್ಟ್ ಕೆಡವಲು ಗ್ರಾಮ ಪಂಚಾಯತ್ ಆದೇಶ

ತಿರುವನಂತಪುರಂ: ರಾಜ್ಯಸಭಾ ಸದಸ್ಯ, ಕೇರಳ ಎನ್‍ಡಿಎ ಉಪಾಧ್ಯಕ್ಷ ರಾಜೀವ್ ಚಂದ್ರಶೇಖರ್ ಮೇಲೆ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡ ಆರೋಪ ಕೇಳಿ ಬಂದಿದೆ.

ಕೊಟ್ಟಯಂ ಜಿಲ್ಲೆಯ ಕುಮರಕುಮ ಎಂಬಲ್ಲಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ರೆಸಾರ್ಟ್ ನಿರ್ಮಾಣವಾಗಿದೆ ಎಂದು ಸರ್ಕಾರ ಕಂದಾಯ ಇಲಾಖೆ ತಿಳಿಸಿದೆ.

ಕಂದಾಯ ಇಲಾಖೆ ದೃಢಪಡಿಸಿದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಈ ವಿಷ್ಣು ನಂಬೂದಿರಿ ಒತ್ತುವರಿ ಮಾಡಿಕೊಂಡಿರುವ ಜಾಗದಲ್ಲಿ ನಿರ್ಮಾಣವಾಗಿರುವ ರೆಸಾರ್ಟ್ ಕೆಡವಲು ನೋಟಿಸ್ ಜಾರಿ ಮಾಡಿದ್ದಾರೆ.

ಹಿನ್ನೀರಿನ ದಂಡೆಯಲ್ಲಿರುವ ರೆಸಾರ್ಟ್ ಕಟ್ಟಡಗಳು ಮತ್ತು ಗೋಡೆಗಳು ಒತ್ತುವರಿಯಾಗಿದ್ದು, ಈ ಒತ್ತುವರಿಯಾಗಿರುವ ಜಾಗವನ್ನು 15 ದಿನಗಳ ಒಳಗಡೆ ಕೆಡವಬೇಕು ಮತ್ತು ಒತ್ತುವರಿ ಮಾಡಿಕೊಂಡಿದ್ದು ಯಾಕೆ ಎನ್ನುವುದಕ್ಕೆ ಕಾರಣ ತಿಳಿಸಬೇಕು. ಒಂದು ವೇಳೆ ನೀಡಿರುವ ಡೆಡ್‍ಲೈನ್ ಒಳಗಡೆ ಕೆಡವದೇ ಇದ್ದಲ್ಲಿ ಪಂಚಾಯತ್ ರೆಸಾರ್ಟ್ ಕೆಡವಲು ಆದೇಶ ನೀಡುತ್ತದೆ ಎಂದು ನೋಟಿಸ್ ನಲ್ಲಿ ತಿಳಿಸಿದ್ದಾರೆ.

ಫೋಟೋ ಕೃಪೆ: ಇಂಡಿಯನ್ ಎಕ್ಸ್ ಪ್ರೆಸ್

ಈ ಆರೋಪಕ್ಕೆ ಸಂಸದ ರಾಜೀವ್ ಚಂದ್ರಶೇಖರ್ ಪ್ರತಿಕ್ರಿಯಿಸಿ, ರೆಸಾರ್ಟ್ ಒತ್ತುವರಿಯಾಗಿಲ್ಲ. ರಾಜಕೀಯ ಕಾರಣಕ್ಕಾಗಿ ಈ ವಿವಾದವನ್ನು ಸೃಷ್ಟಿಸಿದ್ದಾರೆ. ಅಡಳಿತರೂಢ ಸರ್ಕಾರದ ಬೆಂಬಲಿಗರು ನನ್ನ ರೆಸಾರ್ಟ್ ಮೇಲೆ ದಾಳಿ ಮಾಡಿ ಧ್ವಂಸ ಮಾಡಿದ್ದಾರೆ. ಮುನ್ನಾರ್ ನಲ್ಲಿ ಜಾಗವನ್ನು ಒತ್ತುವರಿ ಮಾಡಿರುವ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದಲ್ಲಿ ದೂರು ನೀಡಿದ್ದಕ್ಕೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಕಳೆದ ತಿಂಗಳು ಎನ್‍ಸಿಪಿ ನಾಯಕ ಥಾಮಸ್ ಚಾಂಡಿ ಜಾಗ ಒತ್ತುವರಿ ಮಾಡಿಕೊಂಡಿದ್ದಕ್ಕೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಈ ಪ್ರಕರಣದಲ್ಲಿ ರಾಜೀವ್ ಚಂದ್ರಶೇಖರ್ ರಾಜೀನಾಮೆ ನೀಡಬೇಕು ಆಡಳಿತರೂಢ ಎಡರಂಗ ಸರ್ಕಾರದ ನಾಯಕರು ಆಗ್ರಹಿಸಿದ್ದಾರೆ.

ಪಬ್ಲಿಕ್ ಟಿವಿಗೆ ಸಂಸದ ರಾಜೀವ್ ಚಂದ್ರಶೇಖರ್ ಪ್ರತಿಕ್ರಿಯಿಸಿ, ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವಾಗ ಇದೆಲ್ಲ ಸಾಮಾನ್ಯ. ನನ್ನ ಮೇಲೆ ಮಾಡಿರುವ ಆರೋಪಗಳೆಲ್ಲ ಆಧಾರ ರಹಿತ. ಈ ವಿವಾದ ಈಗಾಗಲೇ ಕೋರ್ಟ್ ನಲ್ಲಿದೆ ನಮ್ಮ ಸಂಸ್ಥೆ ಈಬಗ್ಗೆ ತನ್ನ ವಾದ ಮಂಡಿಸಲಿದೆ. ಈ ಸುಳ್ಳು ಆರೋಪಕ್ಕೆ ನಾನು ಹೆದರುವುದಿಲ್ಲ ಎರಡು ಷರತ್ತುಗಳೊಂದಿಗೆ ನಾನು ರಾಜೀನಾಮೆ ನೀಡಲು ಸಿದ್ಧ. ಕೇರಳದಲ್ಲಿ ರಾಜಕೀಯ ಪ್ರೇರಿತ ದಾಳಿಗಳು ನಿಲ್ಲಬೇಕು. ಕೆಲವು ಕ್ರಿಮಿನಲ್ ಗಳನ್ಮು ಜೈಲಿಗೆ ಕಳುಹಿಸಬೇಕಿದೆ. ಈ ಎರಡು ಷರತ್ತಿಗೂ ಒಪ್ಪಿದ್ರೆ ನಾನು ರಾಜೀನಾಮೆ ನೀಡುತ್ತೇನೆ ಎಂದು ತಿಳಿಸಿದರು.

 

 

Comments

Leave a Reply

Your email address will not be published. Required fields are marked *