ವಿಜಯೇಂದ್ರ ಯಾವುದೇ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ: ಬಿಎಸ್‍ವೈ

ಮೈಸೂರು: ವಿಜಯೇಂದ್ರ ಸದ್ಯಕ್ಕೆ ಯಾವುದೇ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ಮುಂದೆ ಅವರು ಯಾವ ಕ್ಷೇತ್ರದಲ್ಲಿ ನಿಲ್ಲುತ್ತಾರೆ ಎನ್ನುವುದು ನಿರ್ಧಾರವಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಮೈಸೂರಿನ ಸುತ್ತೂರು ಶಾಖಾ ಮಠದಲ್ಲಿ ಮಾತನಾಡಿದ ಅವರು, ವಿಜಯೇಂದ್ರ ಯಾವುದೇ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ಮುಂದೆ ಅವರು ಯಾವ ಕ್ಷೇತ್ರದಲ್ಲಿ ನಿಲ್ಲುತ್ತಾರೆ ಎನ್ನುವುದು ನಿರ್ಧಾರವಾಗಿಲ್ಲ. ಸದ್ಯ ಅವರು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ನಾನು ಮತ್ತು ರಾಜ್ಯಾಧ್ಯಕ್ಷರು ಸಹ ರಾಜ್ಯ ಪ್ರವಾಸ ಮಾಡುತ್ತೇವೆ. ಅಧಿವೇಶನ ಮುಗಿಯಲಿ, 15 ದಿನಗಳ ನಂತರ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡುತ್ತೇವೆ. ಈ ಬಗ್ಗೆ ರೂಪುರೇಷೆ ಸಿದ್ಧವಾಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಪ್ರಧಾನಿ ಮೋದಿ ಹುಟ್ಟುಹಬ್ಬ- ಎಸ್‍ಟಿ ಕುಟುಂಬಗಳಿಗೆ ದಿನಸಿ ವಿತರಿಸಿದ ಶೋಭಾ

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಉತ್ತಮ ಆಡಳಿತ ನೀಡುತ್ತಿದ್ದಾರೆ ಅನ್ನೋದು ನನ್ನ ಅಭಿಪ್ರಾಯ. ರಾಜ್ಯದ ಜನರ ಅಭಿಪ್ರಾಯವೂ ಅದೇ ಇದೆ. ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಆಡಳಿತ ನೀಡಲಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ದೇವಾಲಯ ತೆರವು ಮಾಡಿದ್ದು ಸರಿಯಲ್ಲ. ಈ ಬಗ್ಗೆ ಸಿಎಂ ಬೊಮ್ಮಾಯಿ ತೆರವುಗೊಳಿಸದಂತೆ ಸೂಚನೆ ನೀಡಿದ್ದಾರೆ. ಮೊದಲು ಚರ್ಚೆ ಮಾಡಬೇಕಿತ್ತು. ಹೀಗೆ ಏಕಾಏಕಿ ಧ್ವಂಸ ಮಾಡುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ದೇಗುಲ ತೆರವು ಮಾಡದಂತೆ ಆಗ್ರಹ ಮಾಡುತ್ತೇನೆ ಎಂದು ಸುತ್ತೂರು ಮಠದಲ್ಲಿ ಹೇಳಿದರು.

ಸಿಎಂ ಸ್ಥಾನದಿಂದ ಇಳಿದ ಮೇಲೆ ಮೊದಲ ಬಾರಿಗೆ ಬಿ.ಎಸ್.ಯಡಿಯೂರಪ್ಪ ಮೈಸೂರಿಗೆ ಭೇಟಿ ನೀಡಿದ್ದರು. ಮೈಸೂರಿನ ಸುತ್ತೂರು ಮಠಕ್ಕೆ ಆಗಮಿಸಿದ್ದ ಅವರು, ಸುತ್ತೂರು ಶ್ರೀಗಳ ಆಶೀರ್ವಾದ ಪಡೆದರು. ಯಡಿಯೂರಪ್ಪ ಜೊತೆಗೆ ಮೈಸೂರಿನ ಬಿಜೆಪಿ ಮುಖಂಡರು ಭಾಗಿಯಾಗಿದ್ದರು. ಸಂಸದ ಪ್ರತಾಪ್ ಸಿಂಹ, ಶಾಸಕ ಎಸ್.ಎ.ರಾಮದಾಸ್, ಮಾಜಿ ಸಚಿವ ವಿಜಯಶಂಕರ್, ಮೇಯರ್ ಸುನಂದಾ ಪಾಲನೇತ್ರ ಸೇರಿದಂತೆ ನಿಗಮ ಮಂಡಳಿಗಳ ಅಧ್ಯಕ್ಷರು ಸಾಥ್ ನೀಡಿದರು.

Comments

Leave a Reply

Your email address will not be published. Required fields are marked *