ಮಹಾರಾಷ್ಟ್ರಕ್ಕೆ ನೀರು ಬಿಡುವ ಬಗ್ಗೆ ಸಿಎಂ ಪರ ಯತ್ನಾಳ್ ಬ್ಯಾಟಿಂಗ್

– ಕರ್ನಾಟಕ, ಮಹಾರಾಷ್ಟ್ರ ಒಂದೇ ತಾಯಿಯ ಮಕ್ಕಳಿದ್ದಂತೆ
– ಕೊಡುವುದು, ಕೊಳ್ಳುವುದು ಸಹಜ ಪ್ರಕ್ರಿಯೆ

ವಿಜಯಪುರ: ಮಹಾರಾಷ್ಟ್ರಕ್ಕೆ ನೀರು ಬಿಡುವ ವಿಚಾರವಾಗಿ ಹೇಳಿಕೆ ನೀಡಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಪರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬ್ಯಾಟ್ ಬೀಸಿದ್ದಾರೆ.

ನಗರದಲ್ಲಿ ಮಾತನಾಡಿದ ಶಾಸಕರು, ಕರ್ನಾಟಕ ಹಾಗೂ ಮಹಾರಾಷ್ಟ್ರ ಒಂದೇ ತಾಯಿಯ ಮಕ್ಕಳಿದ್ದಂತೆ. ಕೇಂದ್ರ ಬಿಜೆಪಿ ಸರ್ಕಾರವು ಕಾಶ್ಮೀರ ಸಮಸ್ಯೆಯನ್ನೇ ಬಗೆಹರಿಸಿದೆ. ಇನ್ನು ರಾಜ್ಯಗಳ ಮಧ್ಯೆ ಇರುವ ಜಲ ಸಮಸ್ಯೆ ಬಗೆಹರಿಸುವುದಿಲ್ಲವೇ? ನದಿಗಳ ಜೋಡನೆಗೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಪ್ರಮುಖ್ಯತೆ ನೀಡುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮಹಾರಾಷ್ಟ್ರಕ್ಕೆ ಕರ್ನಾಟಕದ ನೀರು – ಸಿಎಂ ಬಿಎಸ್‍ವೈ ಸ್ಪಷ್ಟನೆ

ಕರ್ನಾಟಕ, ಮಹಾರಾಷ್ಟ್ರ ಸಹೋದರ ರಾಜ್ಯಗಳು. ಕೊಡುವುದು, ಕೊಳ್ಳುವುದು ಸಹಜ ಪ್ರಕ್ರಿಯೆ. ವ್ಯಾಜ್ಯಗಳು ಬಂದಾಗ ಕರ್ನಾಟಕ ತನ್ನ ನಿಲುವನ್ನು ಯಾವತ್ತೂ ಬದಲಿಸಿಲ್ಲ. ಮಹದಾಯಿ ವಿವಾದದಲ್ಲಿ ಗೋವಾ ಮಾತ್ರ ಮೊಂಡುತನ ತೋರುತ್ತಿದೆ. ಈ ಸಮಸ್ಯೆಯನ್ನು ಕರ್ನಾಟಕ, ಮಹಾರಾಷ್ಟ್ರ ಮುಖ್ಯಮಂತ್ರಿಗಳು ಪರಸ್ಪರ ಮಾತುಕತೆ ಮೂಲಕ ಬಗೆಹರಿಸಬೇಕು ಎಂದರು.

ಮಹಾರಾಷ್ಟ್ರದ ಜತ್ ಭಾಗದಲ್ಲಿ ಕನ್ನಡಿಗರೇ ಹೆಚ್ಚಾಗಿದ್ದಾರೆ. ಈ ಹಿಂದೆ ಬಿ.ಡಿ.ಜತ್ತಿ ಅವರು ಮುಖ್ಯಮಂತ್ರಿ ಆಗಿದ್ದಾಗ ಮಾಡಿದ್ದು ಪ್ರಮಾದವಾಗಿದೆ. ಅನೇಕ ಬಾರಿ ಮಹಾರಾಷ್ಟ್ರ ಹಣ ಪಡೆಯದೇ ಕೃಷ್ಣಾ, ಭೀಮಾ ನದಿ ಮೂಲಕ ಕರ್ನಾಟಕಕ್ಕೆ ನೀರು ಬಿಡುಗಡೆ ಮಾಡಿದೆ. ಇಲ್ಲಿ ಕೊಡುವ, ಕೊಳ್ಳುವ ನೀತಿ ಅನುಸರಿಸುವುದು ಸೂಕ್ತ. ಭಾರತವು ಪಾಕಿಸ್ತಾನಕ್ಕೆ ನೀರು ಬಿಟ್ಟಿದೆ. ಹೀಗಿರುವಾಗ ನೆರೆ ರಾಜ್ಯಗಳಿಗೆ ನೀರು ಪೂರೈಕೆ ಮಾಡದೆ ಇರುವದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಗಡಿ, ಜಲ ವಿವಾದ ಮೀರಿ ಮಾನವೀಯತೆ ಮೇಲೆ ವರ್ತಿಸುವುದು ಅಗತ್ಯವಾಗಿದೆ. ಮಹದಾಯಿ ವಿವಾದದಲ್ಲಿ ಕೇಂದ್ರ ಸರ್ಕಾರ ಗೋವಾ ಜೊತೆ ಮಾತನಾಡಬೇಕು. ಮಹಾರಾಷ್ಟ್ರ, ಕರ್ನಾಟಕ ಒಂದಾದರೆ ಗೋವಾ ಒಪ್ಪಲೇ ಬೇಕಾಗುತ್ತದೆ. ಈ ಮೂಲಕ ಮಹದಾಯಿ ಸಮಸ್ಯೆಗೆ ಪರಿಹಾರ ಸಿಗಲಿದೆ. ಸಿಎಂ ಯಡಿಯೂರಪ್ಪ ಅವರು ಈಗಷ್ಟೇ ಅಲ್ಲ, ಚುನಾವಣೆ ಬಳಿಕವೂ ಈ ಬಗ್ಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಬಿಎಸ್‍ವೈ ಹೇಳಿದ್ದೇನು?
ಮಹಾರಾಷ್ಟ್ರಕ್ಕೆ ಚುನಾವಣಾ ಪ್ರಚಾರಕ್ಕೆ ಹೋಗಿದ್ದ ಬಿಎಸ್‍ವೈ, ಜತ್ ತಾಲೂಕಿನ ಹೆಚ್ಚು ಜನರು ಕನ್ನಡ ಭಾಷಿಕರು. ಕೃಷಿ ಮತ್ತು ಕುಡಿಯುವ ನೀರಿನ ಅಭಾವ ತೀವ್ರವಾಗಿರುವಂತದ್ದು. ಇವತ್ತು ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮಕ್ಕೆ ತಲುಪಿದೆ. ಈ ಗ್ರಾಮದಿಂದ 8-10 ಕಿಮೀ ದೂರದಲ್ಲಿ ಹರಿಯುತ್ತಿರುವ ಬೋರಾ ನದಿಗೆ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ಹರಿಸುವುದರಿಂದ 30-40 ಗ್ರಾಮಗಳಿಗೆ 1 ಲಕ್ಷಕ್ಕೂ ಹೆಚ್ಚು ಜನರಿಗೆ ಇದರಿಂದ ಅನುಕೂಲ ಆಗುತ್ತೆ ಅನ್ನೋದನ್ನು ಕೇಳಿದ್ದೇವೆ.

ನಮ್ಮ ಅಧಿಕಾರಿಗಳೊಂದಿಗೆ ಚರ್ಚಿಸಿ, ಮಹಾರಾಷ್ಟ್ರ ಸಿಎಂ ಘಡ್ನವೀಸ್ ಜೊತೆಗೂ ಚರ್ಚೆ ಮಾಡುತ್ತೇನೆ. ಮಹಾರಾಷ್ಟ್ರ ಬೇರೆ, ಕರ್ನಾಟಕ ಬೇರೆಯಲ್ಲ. ನೀರಿಲ್ಲದಿದ್ದರೆ ಬದುಕಲು ಆಗಲ್ಲ. ರೈತರ ಹೊಲಕ್ಕೆ ನೀರು ಬೇಕು, ರೈತರ ಬೆಳೆದಂತಹ ಬೆಳೆಗೆ ವೈಜ್ಞಾನಿಕ ಬೆಲೆ ಸಿಗಬೇಕು. ರೈತರ ಉತ್ಪನ್ನ 2 ಪಟ್ಟು ಹೆಚ್ಚಾಗಬೇಕು ಅಂತಾ ಪ್ರಧಾನಿ ಮೋದಿ ಅಪೇಕ್ಷೆ ಇದೆ. ಇದನ್ನು ಪೂರೈಸಲು ನಮ್ಮ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ. ನಿಮಗೆ ಯಾವ ರೀತಿ ಅನುಕೂಲ ಮಾಡಕ್ಕೆ ಸಾಧ್ಯ ಇದೆಯೋ, ಚರ್ಚೆ ಮಾಡಿ ಸಹಕಾರ ಕೊಡುತ್ತೇನೆ. ಯಡಿಯೂರಪ್ಪ ಬಂದಿದ್ದಕ್ಕೆ, ಇಲ್ಲಿ ಮಾತನಾಡಿದ್ದಕ್ಕೆ ಹಿಂದಿನ ಬಾರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿಕೊಡಬೇಕು ಎಂದು ಮತದಾರರಲ್ಲಿ ಸಿಎಂ ಮನವಿ ಮಾಡಿಕೊಂಡಿದ್ದರು.

Comments

Leave a Reply

Your email address will not be published. Required fields are marked *