– ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿಯ ನೋವು ಕೇಳಿ ಕಣ್ಣೀರಿಟ್ಟ ಸ್ಥಳೀಯರು
ವಿಜಯಪುರ: ಟಂಟಂಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಮಕ್ಕಳು, ಮಹಿಳೆಯರು ಸೇರಿ ಐವರು ಮೃತಪಟ್ಟ ದುರ್ಘಟನೆ ವಿಜಯಪುರ ತಾಲೂಕಿನ ಬರಟಗಿ ತಾಂಡಾ ಬಳಿ ಸಂಭವಿಸಿದೆ.
ಬಸವನ ಬಾಗೇವಾಡಿ ತಾಲೂಕಿನ ಡೋಣೂರ ಗ್ರಾಮದ ಟಂಟಂ ಚಾಲಕ ಅರವಿಂದ್ ಅಗಸರ(32), ಉಳಿದ ನಾಲ್ವರು ಮೃತರು ಅದೇ ಗ್ರಾಮದವರಾಗಿದ್ದಾರೆ. ಈ ಅವಘಡದಲ್ಲಿ ಬದುಕುಳಿದ ಓರ್ವ ವಿದ್ಯಾರ್ಥಿಯ ಕಾಲಿಗೆ ಭಾರೀ ಹೊಡೆತ ಬಿದ್ದಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರಗೆ ಕರೆದುಯೊಯ್ಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಡೋಣುರ ಗ್ರಾಮ ಮಕ್ಕಳು, ಮಹಿಳೆಯರು ಸೋಲಾಪುರ-ವಿಜಯಪುರ ರಾಷ್ಟ್ರೀಯ ಹೆದ್ದಾರಿ 13ರ ಮಾರ್ಗವಾಗಿ ಇಂಚಗೇರಿ ಜಾತ್ರೆಗಾಗಿ ತೆರಳುತ್ತಿದ್ದರು. ವಿಜಯಪುರ ತಾಲೂಕಿನ ಬರಟಗಿ ತಾಂಡಾ ಎದುರಿಗೆ ಬಂದ ಲಾರಿ ಚಾಲಕ ಟಂಟಂಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ರಸ್ತೆಯಿಂದ ಹಾರಿ ಕೆಳಗೆ ಟಂಟಂ ಬಿದ್ದಿದ್ದು, ಅದರಲ್ಲಿದ್ದ ಐವರು ಪ್ರಯಾಣಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಸ್ಥಳೀಯರು ಹಾಗೂ ಪ್ರಯಾಣಿಕರು ತಕ್ಷಣವೇ ಘಟನಾ ಸ್ಥಳಕ್ಕೆ ಬಂದು ಗಂಭೀರವಾಗಿ ಗಾಯಗೊಂಡಿದ್ದ ಓರ್ವ ವಿದ್ಯಾರ್ಥಿಯನ್ನು ಸಮೀಪ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ವಿದ್ಯಾರ್ಥಿ ನೋವನ್ನು ಕಂಡು ಸ್ಥಳೀಯರು ಕಣ್ಣೀರಿಟ್ಟಿದ್ದಾರೆ.

ಘಟನೆಯಿಂದಾಗಿ ಕೆಲಹೊತ್ತು ವಾಹನ ಸಂಚಾರ ಅಸ್ತವ್ಯವಾಗಿತ್ತು. ಇತ್ತ ಚಾಲಕ ಘಟನಾ ಸ್ಥಳದಲ್ಲಿಯೇ ಲಾರಿಯನ್ನು ಬಿಟ್ಟು ಪರಾರಿಯಾಗಿದ್ದಾನೆ. ಈ ಕುರಿತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿದ ವಿಜಯಪುರ ಗ್ರಾಮೀಣ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೃತರಲ್ಲಿ ಓರ್ವನ ಹೆಸರು ಮಾತ್ರ ತಿಳಿದು ಬಂದಿದ್ದು, ಉಳಿದವರ ಗುರುತು ಪತ್ತೆಯಾಗಿಲ್ಲ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply