ವಿಜಯಪುರದಲ್ಲಿ ಆರ್‌ಟಿಇ ಗೋಲ್‌ಮಾಲ್- ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಬಸ್ಸಿಗೂ ಅನುದಾನ

– ಶಿಕ್ಷಣ ಇಲಾಖೆ ಅಧಿಕಾರಿಗಳ ಎಡವಟ್ಟು

ವಿಜಯಪುರ: ಬಡ ವಿದ್ಯಾರ್ಥಿಗಳ ಶಿಕ್ಷಣದ ಅನುಕೂಲಕ್ಕಾಗಿ ಶಿಕ್ಷಣ ಹಕ್ಕು ಕಾಯಿದೆ(ಆರ್‌ಟಿಇ) ಜಾರಿಗೆ ಬಂದಿದೆ. ಅದಕ್ಕಾಗಿ ರಾಜ್ಯ ಸರ್ಕಾರವೇ ಆರ್‌ಟಿಇ ಅಡಿಯಲ್ಲಿ ದಾಖಲಾಗುವ ವಿದ್ಯಾರ್ಥಿಗಳ ಶುಲ್ಕ ಭರಿಸುತ್ತೆ. ಆದರೆ ಶಿಕ್ಷಣ ಇಲಾಖೆ ಅಧಿಕಾರಿಗಳು ಇದರಲ್ಲೂ ಗೋಲ್‍ಮಾಲ್ ಮಾಡಲು ಶುರು ಮಾಡಿಕೊಂಡಿದ್ದಾರೆ.

ಹೌದು. ಆರ್‌ಟಿಇ ಅಡಿಯಲ್ಲಿ ಖಾಸಗಿ ಶಾಲೆಗಲ್ಲಿ ಬಡ ಮಕ್ಕಳು ಕೂಡ ವಿದ್ಯಾಭ್ಯಾಸ ಮಾಡಬಹುದು. ಇದಕ್ಕೆ ಸರ್ಕಾರ ಅನುದಾನ ಮೀಸಲಿಟ್ಟಿದೆ. ಅದರಂತೆ ವಿಜಯಪುರ ಜಿಲ್ಲೆಗೆ 2018-19, 2019-20 ರ ಸಾಲಿನಲ್ಲಿ ಆರ್‌ಟಿಇ ವಿದ್ಯಾರ್ಥಿಗಳಿಗೆ ಅನುದಾನ ಮಂಜೂರಾಗಿದೆ. ಆದರೆ ಬಬಲೇಶ್ವರ ಗ್ರಾಮದ ಶ್ರೀ ಶಾರದಾ ವಿದ್ಯಾನಿಕೇತನ ಎಚ್‍ಪಿಎಸ್ ಶಾಲೆಗೆ ಎಲ್ಲ ಶಾಲೆಗೂ ಕೊಡುವಂತೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಅನುದಾನ ಮಂಜೂರು ಮಾಡಿದೆ. ಅದರ ಜೊತೆಗೆ ಶಾಲಾ ವಾಹನದ ನಿರ್ವಹಣೆಗೆ 9,95,600 ರೂ. ಮಂಜೂರು ಆಗಿದ್ಯಂತೆ.

ಆರ್‌ಟಿಇ ಅಡಿಯಲ್ಲಿ ದಾಖಲಾಗುವ ವಿದ್ಯಾರ್ಥಿಗಳ ಶುಲ್ಕವಷ್ಟೇ ನೀಡಬಹುದು. ವಾಹನ ಶುಲ್ಕ ನೀಡಬಾರದೆಂದು ಇದೆ. ಆದರೂ ಲಕ್ಷ ಲಕ್ಷ ಹಣ ಮಂಜೂರು ಆಗಿದ್ದು ಹೇಗೆ ಎಂಬ ಅನುಮಾನ ಈಗ ಎಲ್ಲರನ್ನು ಕಾಡುತ್ತಿದೆ. ಈ ಬಗ್ಗೆ ಡಿಡಿಪಿಐ ಪ್ರಸನ್ನಕುಮಾರ ಹೇಳೋದೇ ಬೇರೆ.

ಹಣ ಮಂಜೂರು ಆಗಬೇಕಾದರೆ ಕ್ಷೇತ್ರ ಶಿಕ್ಷಣಾಧಿಕಾರಿ, ಡಿಡಿಪಿಐ, ಧಾರವಾಡದ ಶಿಕ್ಷಣ ಇಲಾಖೆ ಕಮಿಷನರ್, ಬೆಂಗಳೂರು ಶಿಕ್ಷಣ ಇಲಾಖೆ ಕೇಂದ್ರ ಕಚೇರಿ ಹೀಗೆ ನಾನಾ ಕಚೇರಿಯಲ್ಲಿ ದಾಖಲೆಗಳ ತಪಾಸಣೆ ನಡೆಯುತ್ತೆ. ಆದರೂ ಈ ಹಣ ಹೇಗೆ ಮಂಜೂರಾಯಿತು ಅನ್ನೋದೇ ಯಕ್ಷಪ್ರಶ್ನೆಯಾಗಿದೆ. ಇನ್ನಾದರೂ ಶಿಕ್ಷಣ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಸರ್ಕಾರದ ಬೊಕ್ಕಸಕ್ಕೆ ಆಗುವ ನಷ್ಟ ತಪ್ಪಿಸಬೇಕಿದೆ.

Comments

Leave a Reply

Your email address will not be published. Required fields are marked *