-ಆನಂದ್ ಸಿಂಗ್ಗೆ ಮುಳುವಾಗ್ತಾರಾ ರೆಡ್ಡಿ & ಟೀಂ?
ಬಳ್ಳಾರಿ: ವಿಜಯನಗರ ಉಪ ಕದನ ದಿನೇ ದಿನೇ ರಂಗೇರುತ್ತೆ ಇಂದು ಒಂದು ದಿನಮಾತ್ರ ಬಹಿರಂಗ ಪ್ರಚಾರಕ್ಕೆ ಅವಕಾಶ ಇದೆ. ಹೀಗಾಗಿ ಇಂದು ಎಲ್ಲಾ ಪಕ್ಷಗಳು ಅಬ್ಬರದ ಪ್ರಚಾರಕ್ಕೆ ಮುಂದಾಗಿವೆ. ಆನಂದ್ ಸಿಂಗ್ ಅವರನ್ನು ಕಟ್ಟಿ ಹಾಕಲು ಕೈ ಪಡೆ ವೈರಿಗಳ ವೈರಿಗಳು ಮಿತ್ರರು ಎನ್ನುವ ಪ್ಲ್ಯಾನ್ ಗೆ ಕಾಂಗ್ರೆಸ್ ಕೈ ಹಾಕಿದೆ.
ಹದಿನೈದು ಕ್ಷೇತ್ರದಲ್ಲಿ ನಡೆಯುತ್ತಿರುವ ಈ ಉಪ ಕದನದಲ್ಲಿ ವಿಜಯನಗರ ಕ್ಷೇತ್ರ ಕೊಂಚ ಭಿನ್ನವಾಗಿದೆ. ಯಾಕಂದ್ರೆ ಆನಂದ್ ಸಿಂಗ್ ವಿರುದ್ಧ ಹೋರಾಡಲು ಕಾಂಗ್ರೆಸ್ ಬಳಿ ಕದನ ಕಲಿಗಳೇ ಸಿಗಲಿಲ್ಲ. ಹೀಗಾಗಿ ಅವರು ಹೊಸಪೇಟೆಯ ಪಕ್ಕದ ಸಂಡೂರು ರಾಜಮನೆತನದ ವೆಂಕಟರಾಮ್ ಘೋರ್ಪಡೆ ಅವರನ್ನು ಕಣಕ್ಕೆ ಇಳಿಸಿದೆ. ಹೀಗಾಗಿ, ಕಾಂಗ್ರೆಸ್ ವೈರಿಗಳ, ವೈರಿಗಳನ್ನು ಮಿತ್ರರನ್ನಾಗಿ ಮಾಡಿಕೊಂಡು ಚುನಾವಣಾ ರಣತಂತ್ರ ರೂಪಿಸಿದೆ.

ಆನಂದ್ ಸಿಂಗ್ ಜೊತೆಯಲ್ಲಿ ಕಾಂಗ್ರೆಸ್ ಬಿಟ್ಟು ಕಮಲ ಮುಡಿಯಲು ಮುಂದಾಗಿದ್ದ ಅನಿಲ್ ಲಾಡ್ರನ್ನು ಕ್ಷೇತ್ರದಲ್ಲಿ ಮತ್ತೆ ಕಾಂಗ್ರೆಸ್ಗೆ ಸೆಳೆದು ಆನಂದ್ ಸಿಂಗ್ ವಿರುದ್ಧ ಪ್ರಚಾರಕ್ಕೆ ಇಳಿಸಿದೆ. ಆನಂದ್ ಸಿಂಗ್ ಅವರು ನನಗೆ ಮೋಸ ಮಾಡಿದ್ರು ಅವರನ್ನು ನಂಬಿ ನಾ ಕೆಟ್ಟೆ ಎನ್ನುವ ರೀತಿಯಲ್ಲಿ ಅನಿಲ್ ಲಾಡ್ ತಮ್ಮ ಹತಾಶ ಮಾತುಗಳನ್ನು ಆಡಿದ್ದಾರೆ. ಮೂರು ಚುನಾವಣೆಯಲ್ಲಿ ಆನಂದ್ ಸಿಂಗ್ ವಿರುದ್ಧ ಸ್ಪರ್ಧೆ ಮಾಡಿ ಸೋಲು ಕಂಡಿದ್ದ ದೀಪಕ್ ಸಿಂಗ್ ಅವರನ್ನು ಕಾಂಗ್ರೆಸ್ ತನ್ನತ್ತ ಸೆಳೆದಿದೆ. ಜೊತೆಗೆ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಆನಂದ್ ಸಿಂಗ್ ವಿರುದ್ಧ ಪ್ರಚಾರ ಮಾಡಿಸಿದೆ.
ಇತ್ತ ಬಳ್ಳಾರಿ ಜಿಲ್ಲಾ ವಿಭಜನೆ ವಿಷಯವಾಗಿ ರೆಡ್ಡಿ ಅಂಡ್ ಟೀಂಗೂ ಆನಂದ್ ಸಿಂಗ್ ಅವರಿಗೂ ಮೊದಲಿನಿಂದಲೂ ವಿರೋಧ ಇದೆ. ಹೀಗಾಗಿ ಆನಂದ್ ಸಿಂಗ್ ಪರ ರೆಡ್ಡಿ ಅಂಡ್ ಟೀಮ್ ಕೆಲಸ ಮಾಡ್ತಿಲ್ಲ. ಇನ್ನು ಆನಂದ್ ಸಿಂಗ್ಗೆ ಟಿಕೆಟ್ ನೀಡಿದ್ದಕ್ಕೆ ಜಿಲ್ಲೆಯ ಕೆಲ ಬಿಜೆಪಿ ನಾಯಕರು ಬಹಿರಂಗವಾಗಿ ತಮ್ಮ ಅಭಿಪ್ರಾಯ ಹೇಳದೆ ಇದ್ರು ಒಳಗೊಳಗೆ ಅಸಮಾಧಾನ ಹೊಂದಿದ್ದಾರೆ. ಜೊತೆಗೆ ಕಳೆದ ಸಾರಿ ಬಿಜೆಪಿಯಿಂದ ಟಿಕೆಟ್ ಪಡೆದು ಸ್ಪರ್ಧೆ ಮಾಡಿ, ಕೇವಲ 8 ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದ ಕ್ಷೇತ್ರದ ಮತ್ತೊಬ್ಬ ಪ್ರಭಾವಿ ನಾಯಕ ಗವಿಯಪ್ಪಾ ಅವರು ಪ್ರಚಾರದಿಂದ ದೂರವೇ ಇದ್ದಾರೆ.

ಆನಂದ್ ಸಿಂಗ್ ಸಹೋದರಿ ಸಂಯುಕ್ತ ರಾಣಿ ಸಹ, ಅಸಮಾಧಾನ ಹೊರಹಾಕಿದ್ದು ಪ್ರಚಾರದಿಂದ ದೂರವೇ ಇದ್ದಾರೆ. ಹೀಗಾಗಿ ಆನಂದ್ ಸಿಂಗ್ಗೆ ಕೇವಲ ಕಾಂಗ್ರೆಸ್ ಮಾತ್ರವಲ್ಲ ಬಿಜೆಪಿಯಲ್ಲಿಯೂ ಗೆಲುವು ಬಯಸದೇ ಇರುವವರು ಇದ್ದಾರೆ ಎನ್ನಲಾಗುತ್ತಿದೆ.

Leave a Reply