ಮದ್ಯದ ದೊರೆ ಮಲ್ಯಗೆ ಮತ್ತೊಮ್ಮೆ ಸೋಲು

ನವದೆಹಲಿ: ಭಾರತದ ಬ್ಯಾಂಕುಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿ ಲಂಡನ್ ಸೇರಿರುವ ಮದ್ಯದ ದೊರೆ, ಉದ್ಯಮಿ ವಿಜಯ್ ಮಲ್ಯಗೆ ನ್ಯಾಯಾಲಯದಲ್ಲಿ ಮತ್ತೊಮ್ಮೆ ಸೋಲಾಗಿದೆ. ಭಾರತಕ್ಕೆ ಗಡಿಪಾರು ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಬ್ರಿಟನ್ ಹೈಕೋರ್ಟ್ ಇಂದು ತಿರಸ್ಕರಿಸಿದೆ.

ಇಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸ್ಟೀಫನ್ ಒರ್ವಿನ್ ಮತ್ತು ಎಲಿಜಬೆತ್ ಲೇಯಿಂಗ್ ಅವರಿದ್ದ ದ್ವಿಸದಸ್ಯ ಪೀಠ ಮಲ್ಯ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಜಾ ಮಾಡಿದೆ.

ಪ್ರಕರಣಕ್ಕೆ ಸಂಬಂಧ ಜಿಲ್ಲಾ ಹಿರಿಯ ನ್ಯಾಯಾಧೀಶರು ಕಂಡುಕೊಂಡಿರುವ ಪ್ರಾಥಮಿಕ ಅಂಶವು ಕೆಲವು ವಿಷಯಗಳಲ್ಲಿ ಭಾರತದ ಪ್ರತಿವಾದಿಗಳಾದ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳು ಮಾಡಿರುವ ಆರೋಪಗಳಿಗಿಂತಲೂ ವಿಸ್ತಾರವಾಗಿವೆ. ಈ ಅಂಶವು ಭಾರತ ಮಾಡಿರುವ ಏಳು ಆರೋಪಗಳಿಗೆ ಹೊಂದಿಕೆಯಾಗುತ್ತಿದ್ದು, ಮಲ್ಯ ಸಲ್ಲಿಸಿರುವ ಅರ್ಜಿ ಮಾನ್ಯ ಮಾಡಲು ಯಾವುದೇ ಪ್ರಮುಖ ಅಂಶಗಳಿಲ್ಲ ಎಂದು ಪೀಠ ಹೇಳಿದೆ.

ಸುಮಾರು 9,000 ಕೋಟಿ ಸಾಲ ಮರುಪಾವತಿ ಮಾಡದ ಪ್ರಕರಣದಲ್ಲಿ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡಲು 2018ರ ಡಿಸೆಂಬರ್‌ನಲ್ಲಿ ಬ್ರಿಟನ್‍ನ ವೆಸ್ಟ್ ಮಿನ್‍ಸ್ಟರ್ ನ್ಯಾಯಾಲಯ ಆದೇಶ ನೀಡಿತ್ತು. ಮಲ್ಯ ಗಡಿಪಾರಿಗೆ 2019ರ ಫೆಬ್ರವರಿಯಲ್ಲಿ ಬ್ರಿಟನ್ ಸರ್ಕಾರ ಸಮ್ಮತಿ ನೀಡಿತ್ತು. ಬಳಿಕ ಗಡಿಪಾರು ಆದೇಶ ಪ್ರಶ್ನಿಸಿ ಮಲ್ಯ ಹೈಕೋರ್ಟ್ ಮೆಟ್ಟಿಲೇರಿದ್ದರು. ಈಗ ಅರ್ಜಿ ಕೂಡ ವಜಾ ಆಗಿದ್ದು, ಮಲ್ಯ ಮತ್ತಷ್ಟು ಸಂಕಷ್ಟ ಸಿಲುಕಿದ್ದಾರೆ.

Comments

Leave a Reply

Your email address will not be published. Required fields are marked *