ಮಲ್ಯ ಲಂಡನ್ ಆಸ್ತಿ ಮುಟ್ಟುಗೋಲಿಗೆ ಕೋರ್ಟ್ ಅನುಮತಿ

ಲಂಡನ್: ಬ್ಯಾಂಕ್ ಗಳಿಗೆ ಸಾಲ ಮರುಪಾವತಿಸದೆ ದೇಶ ಬಿಟ್ಟು ಪರಾರಿಯಾಗಿರುವ ವಿಜಯ್ ಮಲ್ಯ ಅವರ ಲಂಡನ್ ನಲ್ಲಿರುವ ಆಸ್ತಿಯನ್ನು ಭಾರತೀಯ ಬ್ಯಾಂಕ್ ಗಳು ಮುಟ್ಟುಗೋಲು ಹಾಕಿಕೊಳ್ಳಲು ಲಂಡನ್ ನ್ಯಾಯಾಲಯ ಅನುಮತಿ ನೀಡಿದೆ.

10 ಸಾವಿರ ಕೋಟಿ ರೂಪಾಯಿ ಸಾಲವನ್ನು ಹಿಂದಿರುಗಿಸದ ಮಲ್ಯ ವಿರುದ್ಧ ಭಾರತೀಯ 13 ಬ್ಯಾಂಕ್ ಗಳು ಲಂಡನ್ ಹೈ ಕೋರ್ಟ್ ನಲ್ಲಿ ಆಸ್ತಿ ಮುಟ್ಟುಗೋಲಿಗೆ ಅನುಮತಿ ಕೇಳಿ ಅರ್ಜಿ ಸಲ್ಲಿಸಿದ್ದವು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಭಾರತೀಯ ಬ್ಯಾಂಕ್ ಗಳು 10 ಸಾವಿರ ಕೋಟಿ ರೂಪಾಯಿ ಗಳಷ್ಟು ಹಣವನ್ನು ವಾಪಸ್ ಪಡೆಯುವುದಕ್ಕೆ ಅರ್ಹತೆ ಹೊಂದಿವೆ. ಲಂಡನ್ ನಲ್ಲಿರುವ ಮಲ್ಯ ಆಸ್ತಿಯಲ್ಲಿ ತಮಗೆ ಬರಬೇಕಿರುವ ಸಾಲದ ಮೊತ್ತದಷ್ಟನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು ಎಂದು ಆದೇಶ ನೀಡಿದೆ.

ಬ್ಯಾಂಕ್ ಗಳ ಪರ ವಕೀಲರು ನ್ಯಾಯಾಲಯದ ಆದೇಶದ ಅನುಸಾರ ಭಾರತದ ಸಾಲ ವಸೂಲಾತಿ ಟ್ರಿಬ್ಯೂನಲ್ ಗೆ ಆದಷ್ಟು ಬೇಗ ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ನಡೆಸಲು ಸೂಚಿಸಬಹುದಾಗಿದೆ.

ಉದ್ಯಮಿ ವಿಜಯ್ ಮಲ್ಯ ಸಾಲ ಪಾವತಿಸದೇ ಲಂಡನ್‍ನಲ್ಲಿ ಇದ್ದುಕೊಂಡು ತಮ್ಮ ವಿರುದ್ಧದ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಖಾತೆಗಳನ್ನು ಮುಟ್ಟುಗೋಲು ಹಾಕಿದ ಪರಿಣಾಮ ಈ ಹಿಂದೆ ಕೋರ್ಟ್ ವಾರಕ್ಕೆ 5 ಸಾವಿರ ಪೌಂಡ್(ಅಂದಾಜು 4.5 ಲಕ್ಷ ರೂ.) ಖರ್ಚು ಮಾಡಲು ಅನುಮತಿ ನೀಡಿತ್ತು. ನಂತರ ಮಲ್ಯ ಪರ ವಕೀಲರು ವಾದಿಸಿ 20 ಸಾವಿರ ಪೌಂಡ್(ಅಂದಾಜು 18.2 ಲಕ್ಷ ರೂ.) ಖರ್ಚು ಮಾಡಲು ಕೋರ್ಟ್ ಅನಮತಿ ನೀಡಿತ್ತು.

 

Comments

Leave a Reply

Your email address will not be published. Required fields are marked *