ಕಷ್ಟಪಟ್ಟು ದುಡಿದ್ರೆ ಸಾಲಲ್ಲ, ಮಲ್ಯನ ರೀತಿ ಸ್ಮಾರ್ಟ್ ಆಗಿ: ನವ ಉದ್ಯಮಿಗಳಿಗೆ ಕೇಂದ್ರ ಸಚಿವರ ಉಪದೇಶ

ಹೈದರಾಬಾದ್: ಕೇವಲ ಕಷ್ಟಪಟ್ಟು ದುಡಿದರೆ ಸಾಲಲ್ಲ, ಮದ್ಯದ ದೊರೆ ವಿಜಯ್ ಮಲ್ಯನ ರೀತಿ ಸ್ಮಾರ್ಟ್ ಆಗಬೇಕು ಎಂದು ಕೇಂದ್ರ ಸಚಿವ ಜುವಾಲ್ ಒರಾಮ್ ಆದಿವಾಸಿ ಜನಾಂಗದ ನವ ಉದ್ಯಮಿಗಳಿಗೆ ಸಲಹೆ ನೀಡಿದ್ದಾರೆ.

2018ರ ರಾಷ್ಟ್ರೀಯ ಆದಿವಾಸಿ ಉದ್ಯಮಿಗಳ ಸಮ್ಮೇಳನದಲ್ಲಿ ಮಾತನಾಡುವ ವೇಳೆ ಜುವಾಲ್ ಒರಾಮ್, ನೀವೆಲ್ಲರೂ ಮುಂದಿನ ದಿನಗಳಲ್ಲಿ ಯಶಸ್ವಿ ಉದ್ಯಮಿಗಳಾಗಬೇಕು. ಕೇವಲ ಕಷ್ಟಪಟ್ಟು ಕೆಲಸ ಮಾಡಿದ್ರೆ ಯಶಸ್ವಿಯಾಗಲ್ಲ. ಕೆಲಸದೊಂದಿಗೆ ಬುದ್ದಿವಂತಿಕೆ, ಜಾಣ್ಮೆಯಿಂದ ಎಲ್ಲ ನಿರ್ಣಯಗಳನ್ನು ತೆಗೆದುಕೊಳ್ಳಬೇಕಿದೆ. ನೀವೆಲ್ಲ ವಿಜಯ್ ಮಲ್ಯರನ್ನು ಬೈಯುತ್ತೀರಿ, ಅವರ ಹಾಗೆಯೇ ನೀವು ಸ್ಮಾರ್ಟ್ ಆಗಬೇಕು ಎಂದು ಉಚಿತ ಸಲಹೆಯನ್ನು ನೀಡಿದ್ದಾರೆ.

ವಿಜಯ್ ಮಲ್ಯ ಓರ್ವ ಸ್ಟಾರ್ಟ್ ಉದ್ಯಮಿಯಾಗಿದ್ದು, ಕೆಲವು ಬುದ್ಧಿವಂತರನ್ನು ತನ್ನ ಬಳಿ ಕೆಲಸಕ್ಕೆ ನೇಮಿಸಿಕೊಂಡು ಬ್ಯಾಂಕ್, ರಾಜಕಾರಣಿಗಳನ್ನು ಮತ್ತು ಸರ್ಕಾರಗಳ ಮೇಲೆ ಪ್ರಭಾವ ಬೀರಿದರು. ವಿಜಯ್ ಮಲ್ಯ ದಿವಾಳಿಯಾಗುವ ಮುನ್ನ ಓರ್ವ ಯಶಸ್ವಿ ಉದ್ಯಮಿಯಾಗಿದ್ದರು. ಉದ್ಯಮಕ್ಕೆ ಸಂಬಂಧಿಸಿದ ಪ್ರತಿಯೊಂದು ವಿಷಯಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸಿದ್ದಾರೆ. ಅವರಲ್ಲಿಯ ಚಾಕಚಕ್ಯತೆ, ನೈಪುಣ್ಯತೆ, ಜಾಣ್ಮೆ, ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ನಿಮ್ಮಲ್ಲಿ ಅಳವಡಿಸಿಕೊಳ್ಳಬೇಕು ಎಂಬ ಉಪದೇಶ ನೀಡಿದ್ದಾರೆ.

ಇತ್ತ ಸಮ್ಮೇಳನದಲ್ಲಿ ಯಶಸ್ವಿ ಉದ್ಯಮಿಯ ಉದಾಹರಣೆಗಾಗಿ ವಿಜಯ್ ಮಲ್ಯರ ಹೆಸರು ಪ್ರಸ್ತಾಪಿಸಿದಕ್ಕೆ ಸಾಮಾಜಿಕ ಜಾಲತಾಣ ಸೇರಿದಂತೆ ಹಲವು ನಾಯಕರಿಂದ ವಿರೋಧ ವ್ಯಕ್ತವಾಗಿದೆ.

ತಮ್ಮ ಹೇಳಿಕೆ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಲೇ ಎಚ್ಚೆತ್ತ ಜುವಾಲ್ ಒರಾಮ್, ನಾನು ಮಾತನಾಡುವ ಭರದಲ್ಲಿ ವಿಜಯ್ ಮಲ್ಯ ಹೆಸರನ್ನು ತೆಗೆದುಕೊಂಡಿದ್ದೇನೆ. ನಾನು ಬೇರೊಬ್ಬ ಯಶಸ್ವಿ ಉದ್ಯಮಿಯ ಹೆಸರನ್ನು ಉದಾಹರಣೆಯನ್ನಾಗಿ ತೆಗೆದುಕೊಳ್ಳಬೇಕಿತ್ತು. ವಿಜಯ್ ಮಲ್ಯ ಹೆಸರು ಬಳಸಿದ್ದು ನನ್ನ ತಪ್ಪು ಎಂದು ಸ್ಪಷ್ಟನೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *