ವಿಜಯ್ ಹಜಾರೆ ಟ್ರೋಫಿ ಕರ್ನಾಟಕದ ಮುಡಿಗೆ – ಹ್ಯಾಟ್ರಿಕ್ ಪಡೆದು ಮಿಥುನ್ ದಾಖಲೆ

– ಹುಟ್ಟು ಹಬ್ಬದ ದಿನವೇ ದಾಖಲೆ
– ವಿಜೆಡಿ ನಿಯಮದ ಅನ್ವಯ ಚಾಂಪಿಯನ್

ಬೆಂಗಳೂರು: ಅಭಿಮನ್ಯು ಮಿಥುನ್ ಹ್ಯಾಟ್ರಿಕ್ ಸಾಧನೆಯಿಂದಾಗಿ ಕರ್ನಾಟಕ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ವಿಜೆಡಿ ನಿಯಮದ ಅನ್ವಯ 60 ರನ್‍ಗಳಿಂದ ತಮಿಳುನಾಡು ತಂಡವನ್ನು ಸೋಲಿಸುವ ಮೂಲಕ ಕರ್ನಾಟಕ 4ನೇ ಬಾರಿ ಟ್ರೋಫಿಯನ್ನು ಗೆದ್ದುಕೊಂಡಿದೆ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟ್ ಮಾಡಿದ ತಮಿಳುನಾಡು 49.5 ಓವರ್ ಗಳಲ್ಲಿ 252 ರನ್‍ಗಳಿಗೆ ಆಲೌಟ್ ಆಯ್ತು. ಈ ಮೊತ್ತವನ್ನು ಬೆನ್ನಟ್ಟುವ ಸಂದರ್ಭದಲ್ಲಿ 23 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು 141 ರನ್‍ಗಳಿಸಿದಾಗ ಜೋರಾಗಿ ಮಳೆ ಸುರಿಯಲು ಆರಂಭವಾಯಿತು. ಮಳೆ ನಿಲ್ಲದ ಪರಿಣಾಮ ವಿ ಜಯದೇವನ್ ಮಾದರಿ ಅಥವಾ ವಿಜೆಡಿ ನಿಯಮದ ಅನ್ವಯ ಕರ್ನಾಟಕ 60 ರನ್ ಗಳಿಂದ ಗೆದ್ದುಕೊಂಡಿದೆ ಎಂದು ಪ್ರಕಟಿಸಲಾಯಿತು.

ಇನ್ನಿಂಗ್ಸ್ ನ ಮೊದಲ ಓವರ್ ನಲ್ಲಿಯೇ ವೇಗಿ ಅಭಿಮನ್ಯು ಮಿಥುನ್ ಮುರುಳಿ ವಿಜಯ್ ವಿಕೆಟ್ ಉರುಳಿಸಿದರು. ಬಳಿಕ ಮೈದಾಕ್ಕಿಳಿದ ಆರ್.ಅಶ್ವಿನ್ ಕೇವಲ 8 ರನ್ ಗಳಿಸಿ ಕೌಶಿಕ್ ವಾಸುಕಿಗೆ ವಿಕೆಟ್ ಒಪ್ಪಿಸಿದರು. ಆರಂಭಿಕ ಬ್ಯಾಟ್ಸ್‍ಮನ್ ಅಭಿವನ್ ಮುಕುಂದ್‍ಗೆ ಬಾಬಾ ಅಪರಾಜಿತ್ ಸಾಥ್ ನೀಡಿ, ತಂಡದ ಮೊತ್ತವನ್ನು ಹೆಚ್ಚಿಸಿದರು. ಮುಕುಂದ್ 110 ಎಸೆತಗಳನ್ನು ಎದುರಿಸಿ 9 ಬೌಂಡರಿ ಸೇರಿ 85 ರನ್ ಗಳಿಸಿ ತಂಡಕ್ಕೆ ಆಸರೆಯಾದರು.

ಬಾಬಾ ಅಪರಾಜಿತ್ 84 ಎಸೆತಗಳಲ್ಲಿ 7 ಬೌಂಡರಿ ಸೇರಿ 66 ರನ್, ವಿ.ಶಂಕರ್ 38 ರನ್ ಸಹಾಯದಿಂದ ತಮಿಳುನಾಡು ತಂಡವು ಎಲ್ಲಾ ವಿಕೆಟ್ ಕಳೆದುಕೊಂಡು ಅಭಿಮನ್ಯು ಮಿಥುನ್ ತಮ್ಮ 10ನೇ ಓವರ್ ನಲ್ಲಿ ಮೊಹಮ್ಮದ್ ಸಲೀಂ, ಅಶ್ವಿನ್ ಮುರುಗನ್ ಹಾಗೂ ಶಾರುಕ್ ಖಾನ್ ವಿಕೆಟ್‍ಗಳನ್ನು ಉರುಳಿಸಿ ಹ್ಯಾಟ್ರಿಕ್ ವಿಕೆಟ್ ದಾಖಲೆ ಬರೆದರು.

ಕರ್ನಾಟಕದ ಆರಂಭಿಕ ಬ್ಯಾಟ್ಸ್‌ಮನ್ ಡಿ.ಪಡಿಕ್ಕಲ್ ತಂಡದ ಮೊತ್ತ 34 ಆಗುವಷ್ಟರಲ್ಲಿ 14 ಎಸೆತಗಳಲ್ಲಿ 11 ಗಳಿಸಿ ವಿಕೆಟ್ ಒಪ್ಪಿಸಿದರು. ಕೆ.ಎಲ್. ರಾಹುಲ್ ಔಟಾಗದೆ 72 ಎಸೆತಗಳಲ್ಲಿ 5 ಬೌಂಡರಿ ಸೇರಿ 52 ಗಳಿಸಿದರೆ, ಎಂಎ ಅಗರ್ವಾಲ್ ಔಟಾಗದೆ 55 ಎಸೆತಗಳಲ್ಲಿ 3 ಸಿಕ್ಸರ್, 7 ಬೌಂಡರಿ ಸಿಡಿಸಿ 69 ರನ್ ಕಲೆ ಹಾಕಿದರು.

ಮಿಥುನ್ ದಾಖಲೆ: ವಿಜಯ್ ಹಜಾರೆ ಟ್ರೋಫಿ ಫೈನಲ್ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ‘ಪಿಣ್ಯ ಎಕ್ಸ್ ಪ್ರೆಸ್’ ಅಭಿಮನ್ಯು ಮಿಥುನ್ ದಾಖಲೆ ಬರೆದಿದ್ದಾರೆ. ವಿಜಯ್ ಹಜಾರೆ ಫೈನಲ್ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಅಭಿಮನ್ಯು ಮಿಥುನ್ ಪಾತ್ರರಾಗಿದ್ದಾರೆ. ವಿಶೇಷ ಏನೆಂದರೆ ಹುಟ್ಟು ಹಬ್ಬದ ದಿನವೇ ಹ್ಯಾಟ್ರಿಕ್ ವಿಕೆಟ್ ಸಾಧನೆ ಜೊತೆಗೆ ಐದು ವಿಕೆಟ್ ಉರುಳಿಸಿ ಅವಿಸ್ಮರಣೀಯ ಕ್ಷಣವನ್ನು ತಮ್ಮದಾಗಿಸಿಕೊಂಡಿದ್ದಾರೆ.

9.5 ಓವರ್ ಎಸೆದ ಅಭಿಮನ್ಯು ಮಿಥುನ್ 34 ರನ್ ನೀಡಿ 5 ವಿಕೆಟ್ ಪಡೆದಿದ್ದಕ್ಕೆ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. 2013, 2014, 2017 ರಲ್ಲಿ ಕರ್ನಾಟಕ ವಿಜಯ್ ಹಜಾರೆ ಟ್ರೋಫಿಯನ್ನು ಗೆದ್ದುಕೊಂಡಿತ್ತು.

Comments

Leave a Reply

Your email address will not be published. Required fields are marked *