ಆರೋಗ್ಯ ಸಿಬ್ಬಂದಿ ರಕ್ಷಣೆಗೆ ನಿಂತ ವಿದ್ಯಾ ಬಾಲನ್

ನವದೆಹಲಿ: ಕೊರೊನಾ ವಿರುದ್ಧ ಹೋರಾಡಲು ಹಲವು ನಟ, ನಟಿಯರು ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತಿದ್ದು, ಕೆಲವರು ಧನಸಹಾಯ ಮಾಡಿದರೆ, ಇನ್ನೂ ಕೆಲವರು ಅಸಹಾಯಕರಿಗೆ ಅಗತ್ಯ ವಸ್ತುಗಳನ್ನು ನಿಡುತ್ತಿದ್ದಾರೆ. ಇನ್ನಷ್ಟು ಜನ ತಾವೇ ಕೊರೊನಾ ವಾರಿಯರ್ಸ್ ಆಗಿ ಹೋರಾಡುತ್ತಿದ್ದಾರೆ. ಆದರೆ ಬಾಲಿವುಡ್ ಖ್ಯಾತ ನಟಿ ವಿದ್ಯಾಬಾಲನ್ ಅವರು ಕೊರೊನಾ ವಾರಿಯರ್ಸ್‍ಗೆ ಸಹಾಯ ಮಾಡಲು ನಿಂತಿದ್ದಾರೆ.

ಈಗಾಗಲೇ ದೇಶಾದ್ಯಂತ ಬಹುತೇಕ ನಟ, ನಟಿಯರು ತಮ್ಮದೇಯಾದ ಕೊಡುಗೆ ನೀಡುತ್ತಿದ್ದು, ಹಲವರು ಪಿಎಂ ಕೇರ್ಸ್‍ಗೆ ಹಣ ಸಂದಾಯ ಮಾಡುವ ಮೂಲಕ ನೆರವಾಗುತ್ತಿದ್ದಾರೆ. ಇನ್ನೂ ಕೆಲವರು ಸಂಕಷ್ಟದಲ್ಲಿರುವ ಸಿನಿಮಾ ದಿನಗೂಲಿ ಕಾರ್ಮಿಕರಿಗೆ ಸಹಾಯ ಮಾಡುತ್ತಿದ್ದಾರೆ. ಇನ್ನೂ ಕೆಲಸ ನಟಿಯರು ತಾವೇ ವೈದ್ಯರಾಗಿ, ನರ್ಸ್‍ಗಳಾಗಿ ಕಾರ್ಯನಿರ್ವಹಿಸುವ ಮೂಲಕ ಜೀವ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ನಟಿ ವಿದ್ಯಾಬಾಲನ್ ವೈದ್ಯರಿಗೆ ಹಾಗೂ ಆರೋಗ್ಯ ಸಿಬ್ಬಂದಿಗೆ ಪಿಪಿಇ ಕಿಟ್ ನೀಡಲು ಮುಂದಾಗಿದ್ದಾರೆ.

ಹಗಲು-ರಾತ್ರಿ ಎನ್ನದೆ ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ ಮತ್ತು ಆರೋಗ್ಯ ಸಿಬ್ಬಂದಿಗೆ ಬೇಕಾಗುವ ಅಗತ್ಯ ಪಿಪಿಇ ಕಿಟ್‍ಗಳನ್ನು ನೀಡಿ ಸಹಾಯ ಮಾಡಿದ್ದಾರೆ. ಸುಮಾರು ಒಂದು ಸಾವಿರಕ್ಕೂ ಅಧಿಕ ಪಿಪಿಇ ಕಿಟ್‍ಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

ಈ ಕುರಿತು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿರುವ ಅವರು, ನಮಸ್ತೆ, ಇಂತಹ ಕಠಿಣ ಪರಿಸ್ಥಿತಿಯಲ್ಲಿ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಯ ರಕ್ಷಣೆಗಾಗಿ ಪಿಪಿಇ ಕಿಟ್‍ಗಳ ಅಗತ್ಯವಿದೆ. ಹೀಗಾಗಿ ನಾವು ಸಹಾಯ ಮಾಡಬೇಕು. ನಾನು 1000 ಪಿಪಿಇ ಕಿಟ್‍ಗಳನ್ನು ಕೊಡುಗೆಯಾಗಿ ನೀಡುತ್ತಿದ್ದೇನೆ. ಅಲ್ಲದೆ ಟ್ರಿಂಗ್ ಜೊತೆಗಿನ ಸಹಭಾಗಿತ್ವದಲ್ಲಿ ಒಂದು ಸಾವಿರ ಪಿಪಿಇ ಕಿಟ್ ತಯಾರಿಗೆ ಸಿದ್ಧತೆ ನಡೆಸಿದ್ದೇವೆ. ಇಂತಹ ಕಠಿಣ ಸಂದರ್ಭದಲ್ಲಿ ಇದು ನಮ್ಮ ವೈದ್ಯರಿಗೆ ಅಗತ್ಯವಿದೆ. ಅಲ್ಲದೆ ನಿಮ್ಮಲ್ಲೂ ಮನವಿ ಮಾಡುತ್ತೇನೆ. ನೀವು ಸಹ ಸಹಾಯ ಮಾಡಿದಲ್ಲಿ ವಿಡಿಯೋ ಸಂದೇಶದ ಮೂಲಕ ವೈಯಕ್ತಿಕವಾಗಿ ನಿಮಗೆ ಧನ್ಯವಾದ ತಿಳಿಸುತ್ತೇನೆ. ಈ ವಿಡಿಯೋ ನಿಮ್ಮೊಂದಿಗೆ ಶಾಶ್ವತವಾಗಿ ನೆನಪಿನಲ್ಲಿರುತ್ತದೆ ಎಂದು ತಿಳಿಸಿದ್ದಾರೆ.

ವಿದ್ಯಾ ಬಾಲನ್ ಇದಕ್ಕಾಗಿ ಒಂದು ತಂಡವನ್ನೇ ಕಟ್ಟಿಕೊಂಡಿದ್ದು, ಮನಿಶ್ ಚಂದ್ರ ಮತ್ತು ನಿರ್ಮಾಪಕ ಅತುಲ್ ಕಸ್ಬೇಕರ್ ಸಹಭಾಗಿತ್ವದಲ್ಲಿ ಈ ಕಾರ್ಯವನ್ನು ಮಾಡಿದ್ದಾರೆ. ಈ ಕುರಿತು ಇನ್‍ಸ್ಟಾಗ್ರಾಮ್‍ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ವಿದ್ಯಾಬಾಲನ್, ಇಂತಹ ಸಮಯದಲ್ಲಿ ಆರೋಗ್ಯ ಸಿಬ್ಬಂದಿ ನಮಗೆ ಬಾರ್ಡರ್‍ನಲ್ಲಿ ಹೋರಾಡುವ ಸೈನಿಕರಿದ್ದಂತೆ. ಆದರೆ ಆರೋಗ್ಯ ಸೈನಿಕರಿಗೆ ಸದ್ಯ ಪಿಪಿಇ ಕಿಟ್‍ಗಳ ಕೊರತೆ ಕಾಡುತ್ತಿದ್ದು, ಇವುಗಳು ಹೆಚ್ಚು ಸಿಗುವಂತೆ ಮಾಡಬೇಕಿದೆ ಎಂದಿದ್ದಾರೆ.

ಒಂದು ವೇಳೆ ಒಂದು ಯುನಿಟ್‍ನ ಒಬ್ಬರಿಗೆ ಕೊರೊನಾ ಸೋಂಕು ತಗುಲಿದರೂ 10-12 ಜನ ಆರೋಗ್ಯ ಸಿಬ್ಬಂದಿಯನ್ನು 2ರಿಂದ 3 ವಾರಗಳ ಕಾಲ ಕ್ವಾರಂಟೈನ್ ಮಾಡುತ್ತಾರೆ. ಆಗ ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿಯ ಕೊರತೆ ಕಾಡುತ್ತದೆ. ಹೀಗಾಗಿ ನನ್ನೊಂದಿಗೆ ಕೈ ಜೋಡಿಸಿ ಎಂದು ಮನವಿ ಮಾಡಿದ್ದಾರೆ. ನೀವು ಯಾವ ರೀತಿಯಾಗಿ ಸಹಾಯ ಮಾಡಬಹುದು ಎಂಬುದನ್ನು ಸಹ ವಿದ್ಯಾಬಾಲನ್ ತಮ್ಮ ವಿಡಿಯೋದಲ್ಲಿ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *