‘ನೀವೇ ಸಾಕಿದ ಗಿಣಿಗಳು ಹದ್ದಾಗಿ ಕುಕ್ಕಿದ್ವು’ ಮಾಜಿ ಸ್ಪೀಕರ್ ಪರ ಸಿದ್ದು ಬ್ಯಾಟಿಂಗ್

– ಸುಧಾಕರ್‌ಗೆ ಸಿದ್ದರಾಮಯ್ಯ ತಿರುಗೇಟು

ಬೆಂಗಳೂರು: ಅಂತೂ ಇಂತೂ ಸದನದಲ್ಲಿ ಮೂರು ದಿನಗಳಿಂದ ನಡೆಯುತ್ತಿದ್ದ ಹಕ್ಕು ಚ್ಯುತಿ ಕದನಕ್ಕೆ ತೆರೆ ಬಿದ್ದಿದೆ. ಮೊನ್ನೆಯ ಮಾತುಗಳಿಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿಷಾದ ವ್ಯಕ್ತಪಡಿಸಿದ ಬೆನ್ನಲ್ಲೇ ಉಭಯ ಪಕ್ಷಗಳ ನಾಯಕರ ಒಪ್ಪಿಗೆ ಮೇರೆಗೆ ಎರಡೂ ಹಕ್ಕುಚ್ಯುತಿ ಪ್ರಕರಣಗಳನ್ನು ಸ್ಪೀಕರ್ ಕೈಬಿಟ್ಟಿದ್ದಾರೆ.

ಬುಧವಾರ ಸದನಕ್ಕೆ ಗೈರಾಗಿದ್ದ ರಮೇಶ್ ಕುಮಾರ್ ಅವರು ಇಂದು ಕಲಾಪಕ್ಕೆ ಹಾಜರಾದರು. ಈ ವೇಳೆ ಮಾತನಾಡಿದ ಅವರು, ನಾನು ಈ ಸಾರ್ವಜನಿಕ ಕ್ಷೇತ್ರಕ್ಕೆ ಅರ್ಹನಲ್ಲ. ಸಚಿವ ಡಾ.ಸುಧಾಕರ್ ವಿರುದ್ಧ ನಾನು ಯಾವುದೇ ಕೆಟ್ಟ ಶಬ್ಧ ಬಳಸಿಲ್ಲ. ಇದನ್ನು ನನ್ನ ಆತ್ಮಸಾಕ್ಷಿಯಾಗಿ ಹೇಳುತ್ತಿದ್ದೇನೆ. ಸುಳ್ಳು ಹೇಳಿ ರಾಜಕಾರಣ ಮಾಡುವವನು ನಾನಲ್ಲ. ಆ ಥರಾ ಪದ ನಾನು ಹೇಳಿದ್ದೀನಿ ಎನ್ನುವುದಾದರೆವಿಷಾದ ವ್ಯಕ್ತಪಡಿಸುತ್ತೇನೆ. ಇದರಿಂದ ನನ್ನ ವ್ಯಕ್ತಿತ್ವ ಕಡಿಮೆ ಆಗಲ್ಲ ಎಂದು ಹೇಳಿದರು.

ಇದಕ್ಕೂ ಮುನ್ನ ಮಾತನಾಡಿದ ಸುಧಾಕರ್, ನೀವೆ ಸಾಕಿದ ಗಿಣಿಗಳು ಹದ್ದಾಗಿ ಕುಕ್ಕಿದ್ವು ಅಂತ ಸ್ಪೀಕರ್ ಕುರ್ಚಿಯಲ್ಲಿ ಕುಳಿತು ರಮೇಶ್ ಕುಮಾರ್ ಹೇಳಿದ್ದನ್ನು ನೆನಪಿಸಿ ವಾಗ್ದಾಳಿ ನಡೆಸಿದರು. ಆಗ ಸಿದ್ದರಾಮಯ್ಯ ಅವರು ಮಧ್ಯಪ್ರವೇಶಿಸಿ, ರಮೇಶ್ ಕುಮಾರ್ ಸರಿಯಾಗೇ ಹೇಳಿದ್ದಾರೆ ಅಂತ ಸುಧಾಕರ್‍ಗೆ ತಿರುಗೇಟು ಕೊಟ್ಟರು.

ಈ ಮಧ್ಯೆ ರಮೇಶ್ ಕುಮಾರ್ ಅವರು, ನಾನು ಅಂದು ಸ್ಪೀಕರ್ ಕುರ್ಚಿಯಲ್ಲಿ ಕುಳಿತು ಮಾತನಾಡಿದ ಮಾತಿಗೆ ಇವತ್ತು ಬದ್ಧ ಅಂತ ಹೇಳಿದರು. ಸ್ಪೀಕರ್ ಆಗಿದ್ದವರು, ಆ ಕುರ್ಚಿಯಲ್ಲಿ ಕುಳಿತು ಮಾತನಾಡಬಹುದಾ? ಅವರು ನಮ್ಮ ಬಗ್ಗೆ ಪೂರ್ವಾಗ್ರಹಪೀಡಿತರಾಗಿದ್ದರು ಅನ್ನೋದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ ಎಂದು ಸುಧಾಕರ್ ಪ್ರಶ್ನೆ ಮಾಡಿದರು. ಇದರಿಂದಾಗಿ ಸದನದಲ್ಲಿ ಒಂದಿಷ್ಟು ಗದ್ದಲ ನಡೆಯಿತು.

Comments

Leave a Reply

Your email address will not be published. Required fields are marked *