ಆರ್.ಅಶೋಕ್‍ಗೆ ಹಿಂಬಡ್ತಿ ಭಾಗ್ಯ: ನಗೆಗಡಲಲ್ಲಿ ತೇಲಿಸಿದ ಸಿದ್ದರಾಮಯ್ಯ

– ಐವತ್ತಾರು ಇಂಚಿನ ಪಿಎಂ ಮೋದಿ ಎದೆಗೆ ತಾಯಿ ಹೃದಯ ಬೇಕಿದೆ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರದಲ್ಲಿ ಸಚಿವ ಆರ್.ಅಶೋಕ್ ಅವರಿಗೆ ಹಿಂಬಡ್ತಿ ಭಾಗ್ಯ ಸಿಕ್ಕಿದೆ ಎಂದು ವಿಧಾನಸಭಾ ವಿಪಕ್ಷ ನಾಯಕ ಸಿದ್ದರಾಮಯ್ಯ ಕಾಲೆಳೆದಿದ್ದಾರೆ.

ವಿಧಾನಸಭಾ ಕಲಾಪದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಸಚಿವ ಆರ್. ಅಶೋಕ್ ಅವರು ಡೆಪ್ಯೂಟಿ ಸಿಎಂ ಆಗಲಿಲ್ಲ. ನೀವು ಡಿಸಿಎಂ ಆಗಬೇಕಿತ್ತು ಎಂದು ಕಾಲೆಳೆದರು. ತಕ್ಷಣವೇ ಎದ್ದು ನಿಂತ ಆರ್.ಅಶೋಕ್, ನಾನೇ ಬೇಡ ಅಂದೆ ಬಿಡಿ ಸಾರ್ ಎಂದರು. ಆಗ ಸಿದ್ದರಾಮಯ್ಯ ಅವರು, ನೋಡಿ ನಿಮಗೆ ಪಕ್ಷ ಹಿಂಬಡ್ತಿ ಭಾಗ್ಯ ಕೊಟ್ಟಿಗೆ ಎಂದಾಗ ಕಲಾಪ ನಗೆಗಡಲಲ್ಲಿ ತೇಲಿತು. ಇದನ್ನೂ ಓದಿ: ಯತ್ನಾಳ್ ಸತ್ಯ ಹೇಳ್ತಾರೆ, ಅವ್ರು ನನಗೆ ಒಳ್ಳೆ ಸ್ನೇಹಿತ: ಸಿದ್ದರಾಮಯ್ಯ

ಪಾಪ ಅಶೋಕ್‍ಗೆ ಡಿಸಿಎಂ ಸ್ಥಾನ ಇಲ್ಲ. ಕೆ.ಎಸ್. ಈಶ್ವರಪ್ಪ ಹಾಗೂ ಜಗದೀಶ್ ಶೆಟ್ಟರ್ ಅವರಿಗೂ ಉಪಮುಖ್ಯಮಂತ್ರಿ ಸ್ಥಾನ ಇಲ್ಲ. ಈಗ ಮಂತ್ರಿ ಆದವರಿಗೆ ಹಾಗೂ ಶಾಸಕರಲ್ಲದವರಿಗೆ ಡಿಸಿಎಂ ಸ್ಥಾನ ಕೊಟ್ಟಿದ್ದಾರೆ ಎಂದು ಉಪ ಮುಖ್ಯಮಂತ್ರಿಗಳಾದ ಅಶ್ವಥ್ ನಾರಾಯಣ ಹಾಗೂ ಲಕ್ಷ್ಮಣ ಸವದಿ ಅವರನ್ನು ಕುಟುಕಿದರು.

ಪ್ರಧಾನಿ ನರೇಂದ್ರ ಮೋದಿ ಬಳಿ ಐವತ್ತಾರು ಇಂಚು ಎದೆ ಇದೆ. ಆದರೆ ಅವರಿಗೆ ತಾಯಿ ಹೃದಯ ಬೇಕಲ್ಲ? ರಾಜ್ಯಕ್ಕೆ ಬರುವಂತೆ ಪ್ರಧಾನಿ ಮೋದಿ ಅವರಿಗೆ ಮನವಿ ಮಾಡುತ್ತೇನೆ ಹಾಗೂ ನೆರೆ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸರ್ವೆ ಮಾಡಿ ಹಾನಿ ವೀಕ್ಷಣೆ ಮಾಡಲಿ ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಎಂದೆಂದು ಕೇಳರಿಯದ ಪ್ರವಾಹ ಎದುರಾಗಿದೆ. ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು. ಕೂಡಲೇ 5000 ಕೋಟಿ ರೂ. ಬಿಡುಗಡೆ ಮಾಡಬೇಕು. ಮಹಾ ಮಳೆ ಹಾಗೂ ಪ್ರವಾಹದಿಂದಾಗಿ ಎಂಟು ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಎರಡು ಲಕ್ಷಕ್ಕೂ ಹೆಚ್ಚು ಸಂತ್ರಸ್ತರು ಮನೆ ಕಳೆದುಕೊಂಡಿದ್ದಾರೆ. ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ಶೀಲಹಳ್ಳಿಯಲ್ಲಿ ಪ್ರವಾಹದಿಂದ ದೊಡ್ಡ ಹಾನಿಯಾಗಿದೆ. ಪ್ರವಾಹ ಉಂಟಾಗಿ 60 ದಿನ ಕಳೆದಿದೆ. ಅಲ್ಲಿನ ಸೇತುವೆಯನ್ನು ಪುನರ್ ನಿರ್ಮಾಣವಾಗಿಲ್ಲ. ಇದು ಸರ್ಕಾರದ ವೈಫಲ್ಯವನ್ನು ತೋರುತ್ತದೆ ಎಂದು ವಾಗ್ದಾಳಿ ನಡೆಸಿದರು.

ಪ್ರಧಾನಿ ಮೋದಿ ಅವರಿಗೆ ಕರ್ನಾಟಕದ ಪ್ರವಾಹ ಪರಿಸ್ಥಿತಿ ಕಾಣಿಸಿಲ್ಲ ಎನ್ನುವುದೇ ನನಗೆ ನೋವು ತಂದಿದೆ. ಇಲ್ಲಿ ಲಕ್ಷಾಂತರ ಜೀವನ ಬೀದಿ ಪಾಲಾಗಿದೆ, ಅದಕ್ಕೆ ಮೊದಲ ಆದ್ಯತೆ ನೀಡಬೇಕು. ಅವರು ವಿದೇಶಕ್ಕೆ ಹೋಗದೆ ಇದ್ದರೆ ಪ್ರಳಯ ಆಗುತ್ತಿತ್ತಾ? ಮನೆ ಕಳಕೊಂಡ ನೆರೆ ಸಂತ್ರಸ್ತರಿಗೆ ಶೆಡ್ ಹಾಕಿ ಕೊಟ್ಟಿಲ್ಲ. ನೆರೆ ಪ್ರದೇಶಗಳಿಗೆ ಪ್ರಧಾನಿ ಮೋದಿ ಭೇಟಿ ನೀಡಿಲ್ಲ. ಚಂದ್ರಯಾನ-2 ಸಂಬಂಧ ಬೆಂಗಳೂರಿಗೆ ಬಂದಿದ್ದ ಪ್ರಧಾನಿ ಮೋದಿ ಅವರಿಗೆ ಕರ್ನಾಟಕದ ಸಮಸ್ಯೆ ಬಗ್ಗೆ ಹೇಳಬಹುದಿತ್ತು. ನನ್ನ ಮಾಹಿತಿ ಪ್ರಕಾರ ಭೇಟಿಯಾಗಲು ರಾಜ್ಯ ಬಿಜೆಪಿಯವರಿಗೆ ಅಪಾಯಿಂಟ್‍ಮೆಂಟ್ ಕೊಟ್ಟಿಲ್ಲ ಎಂದು ಕುಟುಕಿದರು.

Comments

Leave a Reply

Your email address will not be published. Required fields are marked *