ಸದನದಲ್ಲಿ ಗದ್ದಲಕ್ಕೆ ಕಾರಣವಾಯ್ತು ಕಾಶ್ಮೀರ ಫೈಲ್ಸ್‌ – ಸಿನಿಮಾ ವೀಕ್ಷಿಸಿದ ಬಿಜೆಪಿ ನಾಯಕರು

ಬೆಂಗಳೂರು: ಕಾಶ್ಮೀರ ಫೈಲ್ಸ್ ಸಿನಿಮಾ ಇವತ್ತು ಪರಿಷತ್‍ನಲ್ಲಿ ಗದ್ದಲಕ್ಕೆ ಕಾರಣವಾಯ್ತು. ಕಲಾಪ ಶುರುವಾಗುತ್ತಲೇ ಸಭಾಪತಿಗಳು ಸಂಜೆ 6:45ಕ್ಕೆ ದಿ ಕಾಶ್ಮೀರ ಫೈಲ್ಸ್ ಸಿನಿಮಾ ನೋಡಲು ಬನ್ನಿ ಎಂದು ಸರ್ಕಾರದ ಪರವಾಗಿ ಸದಸ್ಯರಿಗೆ ಆಹ್ವಾನ ನೀಡಿದರು.

ಇದನ್ನು ಕಾಂಗ್ರೆಸ್ ತೀವ್ರವಾಗಿ ವಿರೋಧಿಸಿತು. ಕಾಶ್ಮೀರ ಫೈಲ್ಸ್ ಜೊತೆ ಫರ್ಜಾನಾ ಮತ್ತು ವಾಟರ್ ಮೂವಿ ಅಂತ ಇದೆ ಅದನ್ನು ತೋರಿಸಿ ಅಂತ ಹರಿಪ್ರಸಾದ್ ಆಕ್ರೋಶ ಹೊರಹಾಕಿದರು. ಸಲೀಂ ಅಹ್ಮದ್ ಮಾತಾಡಿ, ನಾವ್ ಯಾಕೆ ಮೂವಿ ನೋಡಬೇಕು. ಬಲವಂತ ಏಕೆ ಮಾಡ್ತೀರಿ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಬಾಲಿವುಡ್ ಪಾಪ ತೊಳೆದ ದಿ ಕಾಶ್ಮೀರ್ ಫೈಲ್ಸ್: ಕಂಗನಾ ರಣಾವತ್

ಸಭಾಪತಿ ಕೂಡಲೇ ಪ್ರಕಟಣೆ ಹಿಂಪಡೆಯಬೇಕು ಎಂದು ಸದನದ ಬಾವಿಗಳಿದು ಪ್ರತಿಭಟನೆ ನಡೆಸಿದರು. ಈ ವೇಳೆ ಮಾತಿನ ಚಕಮಕಿ ನಡೆಯಿತು. ಕೊನೆಗೆ ಸಚಿವ ಸೋಮಶೇಖರ್ ಮಾತನಾಡಿ, ಸಿನಿಮಾ ವೀಕ್ಷಣೆ ಮಾಡಿ ಅಂತಾ ಯಾರಿಗೂ ಕಡ್ಡಾಯ ಮಾಡಿಲ್ಲ. ಇಷ್ಟ ಇರುವವರು ಬರಬಹುದು ಎಂದರು.

ಇದಕ್ಕೂ ಹರಿಪ್ರಸಾದ್ ವಿರೋಧ ಮಾಡಿದ್ರು. ಇದೆಲ್ಲಾ ಸರಿ ಇಲ್ಲ. ಸದನದಲ್ಲಿ ಕೆಲವರು ಬ್ಲೂ ಫಿಲ್ಮ್ ನೋಡಿದ್ದಾರೆ. ಅದನ್ನ ನೋಡೋಕೆ ಆಗುತ್ತಾ? ಸರ್ಕಾರ ಮೂವಿ ತೋರಿಸೋಕ ಇರೋದು? ಅಂತ ವಾಗ್ದಾಳಿ ನಡೆಸಿದ್ರು. ಸಭಾನಾಯಕರು, ಸಭಾಪತಿಗಳು ಕೂಡಾ ಇದು ಕಡ್ಡಾಯ ಅಲ್ಲ ಎಂದು ವಿವಾದಕ್ಕೆ ತೆರೆ ಎಳೆದ್ರು. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೇನು?

ಸಂಜೆ ವಿಧಾನಸೌಧದಿಂದ ಎರಡು ಬಸ್‍ಗಳಲ್ಲಿ ಮಂತ್ರಿ ಮಾಲ್‍ಗೆ ಬಂದ ಬಿಜೆಪಿ ಶಾಸಕರು ಒಟ್ಟಿಗೆ ಕುಳಿತು ಸಿನಿಮಾ ನೋಡಿದ್ರು. ಮಾಜಿ ಸಿಎಂ ಯಡಿಯೂರಪ್ಪ, ಸ್ಪೀಕರ್ ಕಾಗೇರಿ, ಮಂತ್ರಿಗಳು ಪಾಲ್ಗೊಂಡಿದ್ದರು. ವಿಪಕ್ಷಗಳ ಕಡೆಯಿಂದ ಜೆಡಿಎಸ್ ಶಾಸಕ ಪುಟ್ಟರಾಜು ಹೊರತುಪಡಿಸಿ ಉಳಿದೆಲ್ಲರೂ ಗೈರಾಗಿದ್ದರು. ಸಿನಿಮಾ ಶುರುವಾಗುವ ಮುನ್ನ ವಂದೇ ಮಾತರಂ ಘೋಷಣೆ ಮೊಳಗಿತು.

Comments

Leave a Reply

Your email address will not be published. Required fields are marked *