– ಪೊಲೀಸರನ್ನ ನೋಡಿದಾಗ ಗೌರವ ತೋರಿಸೋದನ್ನ ಮರಿಬೇಡಿ
ಮುಂಬೈ: ಕೊರೊನಾ ವೈರಸ್ ಜಗತ್ತಿನಾದ್ಯಂತ ಆತಂಕ, ಭಯವನ್ನು ಉಂಟು ಮಾಡಿದೆ. ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ದೇಶವನ್ನು 21 ದಿನ ಲಾಕ್‍ಡೌನ್ ಮಾಡಲಾಗಿದೆ. ಹೀಗಾಗಿ ಹಗಲು-ರಾತ್ರಿ ಎನ್ನದೇ ಪೊಲೀಸರು ತಮ್ಮ ಮನೆಯಿಂದ ದೂರ ಉಳಿದುಕೊಂಡು ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಅಂತಹ ಪೊಲೀಸ್ ಅಧಿಕಾರಿಯೊಬ್ಬರ ಮಗುವೊಂದು ತಂದೆಯನ್ನು ಮನೆಯಿಂದ ಹೊರಗೆ ಹೋಗಬೇಡ ಎಂದು ಅಳುತ್ತಾ ಕೇಳಿಕೊಂಡಿದೆ. ಇದೀಗ ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಪುಟ್ಟ ಮಗುವಿನ ವಿಡಿಯೋ ಇದೀಗ ಎಲ್ಲರ ಮನಕಲುಕುವಂತೆ ಮಾಡುತ್ತಿದೆ. ಈ ವಿಡಿಯೋವನ್ನು ಫ್ಯಾಷನ್ ಡಿಸೈನರ್ ಒಬ್ಬರು ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಕರ್ತವ್ಯಕ್ಕೆ ಹೋಗಲು ಸಿದ್ಧವಾಗುತ್ತಿದ್ದು, ಈ ವೇಳೆ ಅಲ್ಲೆ ಕುಳಿತಿದ್ದ ಪುಟ್ಟ ಕಂದ ಮನೆಯಿಂದ ಹೊರಗೆ ಹೋಗಬೇಡ ಅಪ್ಪ ಎಂದು ಅಳುತ್ತಿರುವುದನ್ನು ಕಾಣಬಹುದಾಗಿದೆ.

“ಮುಂಬೈ ಪೊಲೀಸರಿಗೆ ಸೆಲ್ಯೂಟ್, ಕೊರೊನಾ ವೈರಸ್‍ನಿಂದ ಹೊರಗೆ ಹೋಗಬೇಡ, ಮನೆಯಲ್ಲಿಯೇ ಇರುವಂತೆ ಪುಟ್ಟ ಮಗು ತನ್ನ ತಂದೆಯನ್ನು ಕೇಳುತ್ತಿದೆ. ಆದರೆ ಪೊಲೀಸರು ನಮಗಾಗಿ ಕುಟುಂಬದಿಂದ ದೂರ ಬಂದು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಮುಂದಿನ ಬಾರಿ ನೀವು ಒಬ್ಬ ಪೊಲೀಸ್ ಅಧಿಕಾರಿಯನ್ನು ನೋಡಿದಾಗ ಅವರಿಗೆ ಕೃತಜ್ಞತೆ ಮತ್ತು ಗೌರವ ತೋರಿಸುವುದನ್ನು ಮರೆಯಬೇಡಿ. ಮನೆಯಲ್ಲಿಯೇ ಇದ್ದು ಅವರಿಗೆ ಸುಲಭವಾಗಿಸಿ” ಎಂದು ಟ್ವೀಟ್ ಮಾಡಿದ್ದಾರೆ.

ದೇಶವೇ ಲಾಕ್‍ಡೌನ್ ಆದಗಿನಿಂದ ಮುಂಬೈ ಪೊಲೀಸರು ಮಾತ್ರವಲ್ಲದೇ ಇಡೀ ದೇಶದ ಪೊಲೀಸರು ಬೀದಿಗಿಳಿದು ಮನೆಯಿಂದ ಹೊರಗಡೆ ಬರಬೇಡಿ ಎಂದು ಜನರಲ್ಲಿ ಕೈ ಮುಗಿದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ಕೆಲ ಪೊಲೀಸರು ಲಾಠಿ ಏಟು ಕೊಟ್ಟು ಮನೆಯಲ್ಲಿರಿ ಎಂದು ಎಚ್ಚರಿಕೆ ಕೊಡುತ್ತಿದ್ದಾರೆ. ಆದರೆ ಪೊಲೀಸರು ಇದೆಲ್ಲವನ್ನೂ ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಮಾಡುತ್ತಿದ್ದಾರೆ. ಆದರೂ ಕೆಲವರು ಮನೆಯಿಂದ ಹೊರಗಡೆ ಬಂದು ಓಡಾಡುತ್ತಿದ್ದಾರೆ.
https://twitter.com/ad_singh/status/1242798679049654273

Leave a Reply