ಯುಟ್ಯೂಬ್ ಇಲ್ಲ, ಯೋಗ ಶಿಕ್ಷಕರಿಲ್ಲ, ಆದ್ರೂ ಸೂರ್ಯ ನಮಸ್ಕಾರ ಮಾಡಿದ ಚಿರತೆ

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಭಾರತ ಸೇರಿದಂತೆ ವಿವಿಧ ದೇಶಗಳ ಜನರು ಯೋಗಕ್ಕೆ (Yoga) ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುತ್ತಿದ್ದಾರೆ. ಆದರೆ ಇಲ್ಲೊಂದು ಚಿರತೆ (Leopard) ಸೂರ್ಯ ನಮಸ್ಕಾರ (Surya Namaskar) ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ಸಕತ್ ವೈರಲ್ ಆಗುತ್ತಿದೆ.

ಹೌದು.. ಚಿರತೆಯೊಂದು ಮುಂಜಾನೆ ಗುಡ್ಡದ ಮೇಲೆ ನಿಂತು ಸ್ಟ್ರೇಚ್ ಮಾಡುತ್ತಿದೆ. ಆದರೆ ಇದು ನೋಡುಗರಿಗೆ ಸೂರ್ಯ ನಮಸ್ಕಾರ ಮಾಡಿದಂತೆ ತೋರುತ್ತಿದೆ. ಈ ವೀಡಿಯೋವನ್ನು ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಸುಸಂತ ನಂದಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ವೀಡಿಯೋದಲ್ಲಿ ಏನಿದೆ?: ಮುಂಜಾನೆ ವೇಳೆಯಲ್ಲಿ ಚಿರತೆಯೊಂದು ತನ್ನ ನಿದ್ದೆಯಿಂದ ಎದ್ದ ನಂತರ ಗುಡ್ಡದ ತುದಿಯಲ್ಲಿ ನಿಂತು ಸ್ಟ್ರೇಚ್ ಮಾಡಿಕೊಳ್ಳುತ್ತಿದೆ. ಆದರೆ ವಿಚಿತ್ರ ಎನ್ನುವಂತೆ ಈ ಚಿರತೆ ಮಾಡುತ್ತಿರುವ ಭಂಗಿಗಳೆಲ್ಲವೂ ಸೂರ್ಯ ನಮಸ್ಕಾರವನ್ನು ಹೋಲುತ್ತಿರುವುದು ವೀಡಿಯೋದಲ್ಲಿ ಇದೆ.

ಈ ವೀಡಿಯೋಗೆ ಐಎಫ್‍ಎಸ್ ಅಧಿಕಾರಿ ಚಿರತೆಯಿಂದ ಸೂರ್ಯ ನಮಸ್ಕಾರ ಶೀರ್ಷಿಕೆಯನ್ನು ನೀಡಿದ್ದಾರೆ. ಈಗಾಗಲೇ ಈ ವೀಡಿಯೋಗೆ 1,24,000ಕ್ಕೂ ಅಧಿಕ ವಿಕ್ಷಣೆ ಹಾಗೂ 3,200ಕ್ಕೂ ಹೆಚ್ಚು ಲೈಕ್ ಬಂದಿದೆ. ಜೊತೆಗೆ ಅನೇಕರು ಈ ವೀಡಿಯೋವನ್ನು ನೋಡಿ ಆನಂದಿಸಿದ್ದು, ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

ಓರ್ವ ನೆಟ್ಟಿಗ ಕಾಮೆಂಟ್ ಮಾಡಿ, ಈ ಯೋಗದ ಚಲನೆಗಳನ್ನು ಚಿರತೆಗೆ ಯಾರು ಕಲಿಸಿದ್ದಾರೆ? ಯೋಗ ಶಿಕ್ಷಕರಿಲ್ಲ, ಯುಟ್ಯೂಬ್ ಇಲ್ಲ, ಪುಸ್ತಕಗಳಿಲ್ಲ ಎಂದು ಹೇಳಿದರೇ ಮತ್ತೊಬ್ಬರು ಫಿಟ್ನೆಸ್‍ ಫ್ರೀಕ್ ಚಿರತೆ ಎಂದು ತಮಾಷೆ ಮಾಡಿದ್ದಾರೆ. ಇನ್ನೋರ್ವ ಕಾಮೆಂಟ್ ಮಾಡಿ, ನನ್ನ ನಾಯಿಗಳು ಸಂಜೆಯೂ ಹಾಗೆಯೇ ಮಾಡುತ್ತವೆ. ಅದು ಸೂರ್ಯ ನಮಸ್ಕಾರ ಅಲ್ಲ, ಬೇಟೆಗೆ ಹೋಗಲು ಸೋಮಾರಿತನ ಎಂದು ಹೇಳಿದ್ದಾನೆ.