ಪ್ರಿಯಕರನ ಜೊತೆ ಬಾಂಗ್ಲಾದೇಶಕ್ಕೆ ಓಡಿಹೋಗಿ ಭಾರತಕ್ಕೆ ವಾಪಸ್ ಬರಲ್ಲ ಎಂದ 21ರ ಯುವತಿ: ವಿಡಿಯೋ

ಅಸ್ಸಾಂ: ಯುವತಿಯೊಬ್ಬಳು ತನ್ನ ಪ್ರಿಯಕರನ ಜೊತೆ ಬಾಂಗ್ಲಾದೇಶಕ್ಕೆ ಓಡಿಹೋಗಿ ಭಾರತಕ್ಕೆ ವಾಪಸ್ ಬರಲ್ಲ ಎಂದು ವಿಡಿಯೋ ಮಾಡಿ ಕಳುಹಿಸಿದ್ದಾಳೆ.

ಮೌಸಮಿ ದಾಸ್(21) ಬಾಂಗ್ಲಾದೇಶಕ್ಕೆ ಓಡಿಹೋದ ಯುವತಿ. ಮಾರ್ಚ್ 12ರಂದು ಮೌಸಮಿ ತನ್ನ ಮನೆಯಿಂದ ಕಾಣೆಯಾಗಿದ್ದಳು. ನಂತರ ಆಕೆಯ ಪೋಷಕರು ಕರೀಮ್‍ಗಂಜ್ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿದ್ದಾಳೆ ಎಂದು ದೂರು ದಾಖಲಿಸಿದ್ದರು. ಅಷ್ಟೇ ಅಲ್ಲದೇ ಈ ದೂರಿನಲ್ಲಿ ಪೋಷಕರು ಆಕೆಯನ್ನು ಕಿಡ್ನಾಪ್ ಮಾಡಲಾಗಿದೆ ಎಂದು ಹೇಳಿದ್ದರು.

ಮಾರ್ಚ್ 27ರಂದು ವಾಟ್ಸಾಪ್‍ನಲ್ಲಿ ಒಂದು ವಿಡಿಯೋ ವೈರಲ್ ಆಗಿತ್ತು. ಆ ವಿಡಿಯೋದಲ್ಲಿ ಮೌಸಮಿ ದಾಸ್ ಪೊಲೀಸ್ ಠಾಣೆಯಲ್ಲಿ ಇರುವುದು ಕಂಡು ಬಂದಿತ್ತು. ಇದಾದ ಬಳಿಕ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ಬಾಂಗ್ಲಾದೇಶದಲ್ಲಿ ನಾನು ಖುಷಿಯಾಗಿದ್ದೇನೆ. ನನಗೆ ಭಾರತಕ್ಕೆ ವಾಪಸ್ ಬರಲು ಇಷ್ಟವಿಲ್ಲ ಎಂದು ಮೌಸಾಮಿ ತಿಳಿಸಿದ್ದಾಳೆ.

ವಿಡಿಯೋದಲ್ಲಿ ಏನಿದೆ?
ನಾನು ಮೌಸಾಮಿ ದಾಸ್. ನಾನು ಭಾರತದಿಂದ ಓಡಿ ಬಂದಿದ್ದೇನೆ ಹಾಗೂ ನನ್ನ ಇಚ್ಛೆಯಿಂದ ಬಂದಿದ್ದೇನೆ. ನನಗೆ ಭಾರತಕ್ಕೆ ವಾಪಸ್ ಆಗಲು ಇಷ್ಟವಿಲ್ಲ. ನನ್ನ ಪತಿ ಜೊತೆ ಇರಲು ಇಷ್ಟಪಡುತ್ತೇನೆ. ಇನ್ನೂ ಬಾಂಗ್ಲಾದೇಶ ತುಂಬಾ ಚೆನ್ನಾಗಿದೆ. ನಾನು ಇಲ್ಲಿ ಇರಲು ಇಷ್ಟಪಡುತ್ತೇನೆ ಹಾಗೂ ಇಲ್ಲಿಯೇ ಇರುತ್ತೇನೆ. ನನಗೆ 21 ವರ್ಷವಾಗಿದೆ. ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗೋಕ್ಕೆ ನಾನು ಚಿಕ್ಕ ಮಗು ಅಲ್ಲ. ಪತಿಯಾದ ನೂಮನ್ ಬಾದ್‍ಶಾ ಜೊತೆ ಅಸ್ಸಾಂನ ಕರೀಂಗಂಜ್‍ನಿಂದ ಬಂದಿದ್ದೇನೆ ಎಂದು ಮೌಸಾಮಿ ಹೇಳಿದ್ದಾಳೆ.

ಮೌಸಾಮಿ ಹಿಂದೂವಿನಿಂದ ಮುಸ್ಲಿಂ ಸಮುದಾಯಕ್ಕೆ ಮತಾಂತರಗೊಂಡಿದ್ದು, ವಿಡಿಯೋದಲ್ಲಿ ಬುರ್ಕಾ ಹಾಕಿರುವುದು ಕಂಡು ಬಂದಿದೆ. ಮೌಸಾಮಿ ಬಾಂಗ್ಲಾದೇಶ ತಲುಪಿದ ಮೇಲೆ ಮುಸ್ಲಿಂ ಸಮುದಾಯಕ್ಕೆ ಮತಾಂತರಗೊಂಡು ತನ್ನ ಪ್ರಿಯಕರ ನೂಮನ್ ಬಾದ್‍ಶಾ ಜೊತೆ ವಿವಾಹವಾಗಿದ್ದಾಳೆ. ಇನ್ನೂ ಮೌಸಾಮಿ ಹತ್ತಿರ ಯಾವುದೇ ಪಾಸ್‍ಪೋರ್ಟ್ ಹಾಗೂ ವೀಸಾ ಇಲ್ಲ. ಆಕೆ ಅಕ್ರಮವಾಗಿ ಬಾಂಗ್ಲಾ ತಲುಪಿದ್ದಾಳೆ ಎಂದು ವರದಿಯಾಗಿದೆ.

Comments

Leave a Reply

Your email address will not be published. Required fields are marked *