ಉದ್ಯಮಿ ಸಿದ್ಧಾರ್ಥ್ ನಾಪತ್ತೆ – ಸೇತುವೆಯಿಂದ ಹಾರಿದ್ದನ್ನು ಕಂಡ ಪ್ರತ್ಯಕ್ಷದರ್ಶಿ ಹೇಳಿದ್ದೇನು?

ಮಂಗಳೂರು: ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಅನುಮಾನದ ಬೆನ್ನಲ್ಲೇ ಪ್ರತ್ಯಕ್ಷದರ್ಶಿಯೊಬ್ಬರು ನೀಡಿದ ಹೇಳಿಕೆ ಈಗ ಮಹತ್ವ ಪಡೆದುಕೊಂಡಿದೆ. ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಸ್ಥಳೀಯ ವ್ಯಕ್ತಿ ಸೈಮನ್ ತಾವು ನೋಡಿದ ದೃಶ್ಯಗಳ ಬಗ್ಗೆ ವಿವರಿಸಿದ್ದಾರೆ.

ಸೈಮನ್ ಹೇಳಿದ್ದೇನು?
ಸೋಮವಾರ ಸಂಜೆ 5.30ರ ವೇಳೆಗೆ ನಾನು ನದಿ ಬಳಿ ಮೀನು ಹಿಡಿಯಲು ಹೋಗಿದ್ದೆ. ರಾತ್ರಿ 7.30ರ ವೇಳೆಗೆ ಸೇತುವೆ ಬಳಿ ಶಬ್ದ ಕೇಳಿ ಬಂತು. ತಕ್ಷಣ ನೋಡಿದ ಕೂಡಲೇ ವ್ಯಕ್ತಿಯೊಬ್ಬರು ನದಿಗೆ ಹಾರಿದ್ದು, ಅಲ್ಲಿಂದ ಸ್ವಲ್ಪ ದೂರ ಸಾಗಿದ್ದು ಕಂಡು ಬಂತು. ನಾನು 6ನೇ ಪಿಲ್ಲರ್ ಬಳಿ ಇದ್ದೆ, ಅವರು 8ನೇ ಪಿಲ್ಲರ್ ಬಳಿ ಹಾರಿದ್ದರು.

ಕೂಡಲೇ ಅವರನ್ನು ರಕ್ಷಣೆ ಮಾಡುವ ಪ್ರಯತ್ನ ನಡೆಸಿದೆ. ಒಬ್ಬನೇ ಇದ್ದ ಕಾರಣ ನನಗೆ ಅವರು ಸಿಗಲಿಲ್ಲ. ಆದ್ದರಿಂದ ನನ್ನ ಪ್ರಯತ್ನ ವಿಫಲವಾಯಿತು. ಮೋಟರ್ ಇಲ್ಲದ ದೋಣಿಯಲ್ಲಿ ತೆರಳಿದ್ದೆ. ಬೇಗ ಹೋಗುವ ಪ್ರಯತ್ನ ಸಾಧ್ಯವಾಗಲಿಲ್ಲ. ಅವರು ಯಾವ ರೀತಿ ಇದ್ದರು, ಯಾವ ಬಟ್ಟೆ ಧರಿಸಿದ್ದರು ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಹಿಂದೆ ಇಂತಹದ್ದೆ ಸಂದರ್ಭದಲ್ಲಿ 6 ಮಂದಿಯನ್ನ ರಕ್ಷಣೆ ಮಾಡಿದ್ದೆ. ನಮಗೂ ಜೀವದ ಕುರಿತು ಆಸೆ ಇರುವುದರಿಂದ ನದಿಗೆ ಹಾರದೇ ದೋಣಿ ಮೂಲಕವೇ ಸಾಗುತ್ತೇವೆ. ಏಕೆಂದರೆ ನೀರಿನ ರಭಸ ಹೆಚ್ಚಾಗಿರುತ್ತದೆ.

ಇದಕ್ಕೂ ಮುನ್ನ ಸಾಕಷ್ಟು ಮಂದಿ ಇಲ್ಲಿಯೇ ಬಂದು ಹಾರಿದ್ದರು. ಆದ್ದರಿಂದ ನಾನು ಸ್ಥಳೀಯವಾಗಿ ಮಾಹಿತಿ ನೀಡಿದ್ದೆ ಅಷ್ಟೇ. ಮಳೆ ಪ್ರಮಾಣ ಕಡಿಮೆ ಇರುವುದರಿಂದ ದೇಹ ಸಿಗುವ ಸಾಧ್ಯತೆ ಇದೆ. ಯಾವುದೇ ಮೃತ ದೇಹವಾದರೂ 24 ಗಂಟೆ ಬಳಿಕ ನೀರಿನಿಂದ ಮೇಲೆ ಬರುತ್ತದೆ. ಸಮುದ್ರಕ್ಕೆ ಕೊಚ್ಚಿ ಹೋಗುವ ಸಾಧ್ಯತೆ ಕಡಿಮೆ ಇದ್ದು, ನದಿಯಲ್ಲೇ ಸಿಗುವ ವಿಶ್ವಾಸ ಇದೆ. ಈ ಬಗ್ಗೆ ಬೆಳಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ಕಾರ್ಯಾಚರಣೆ ನಡೆಯುತ್ತಿದ್ದು, ಎಲ್ಲರ ನಿರೀಕ್ಷೆ ಒಂದೇ ಇದೆ ಎಂದರು.

https://www.youtube.com/watch?v=S8AvtIh5VB8

Comments

Leave a Reply

Your email address will not be published. Required fields are marked *