ಮಗು ಬಿದ್ದಿದ್ದು ಆಗುಂಬೆ ಘಾಟಿಯಲ್ಲಿ, ಪೋಷಕರಿಗೆ ಗೊತ್ತಾಗಿದ್ದು ಕೊಪ್ಪದಲ್ಲಿ – ಸುರಕ್ಷಿತವಾಗಿ ಮಡಿಲು ಸೇರಿತು ಕಂದಮ್ಮ

ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆಯ ದಟ್ಟವಾದ ಕಾಡಿನ ನಡುವೆ ಘಾಟಿಯ ಏಳನೇಯ ತಿರುವಿನಲ್ಲಿ ಹೆಣ್ಣು ಮಗುವೊಂದು ಪತ್ತೆಯಾಗಿದೆ.

ಗುರುವಾರ ರಾತ್ರಿ 9.30ರ ಸಮಯದಲ್ಲಿ ಕಾರು ಮಂಗಳೂರಿನಿಂದ ಶಿವಮೊಗ್ಗದ ಕಡೆಗೆ ತೆರಳುತ್ತಿದ್ದಾಗ ಘಾಟಿಯಲ್ಲಿ ಐದು ವರ್ಷದ ಹೆಣ್ಣು ಮಗುವೊಂದು ಅಳುತ್ತಾ ನಿಂತಿತ್ತು. ಇದನ್ನು ಗಮನಿಸಿದ ಚಾಲಕ ತಕ್ಷಣ ಕಾರಿನಿಂದ ಇಳಿದು ಮಗುವನ್ನು ಕರೆ ತಂದು ಆಗುಂಬೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಮಗು ಆಗುಂಬೆ ಠಾಣೆಯಲ್ಲಿ ಸುರಕ್ಷಿತವಾಗಿತ್ತು. ಮಗುವಿನ ಪೋಷಕರು ಯಾರು ಎಂದು ಪೊಲೀಸರು ಪತ್ತೆ ಹಚ್ಚಲು ಮುಂದಾದಾಗ ಪೋಷಕರ ಬೇಜವಾಬ್ದಾರಿಯೇ ಇದಕ್ಕೆ ಕಾರಣ ಎಂದು ತಿಳಿದು ಬಂದಿದೆ.

ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರ ಮೂಲದವರಾದ ಬೀನು ಎಂಬವರು ಕುಟುಂಬ  ಸಮೇತರಾಗಿ ಕೇರಳ ಮತ್ತು ತಮಿಳುನಾಡಿಗೆ ಪ್ರವಾಸ ಹೋಗಿದ್ದರು. ಪ್ರವಾಸದಿಂದ ವಾಪಾಸ್ ಬರುವಾಗ ರಾತ್ರಿ ಸಮಯವಾಗಿದ್ದರಿಂದ ವಾಹನದಲ್ಲಿ ಪೋಷಕರು ನಿದ್ರೆಗೆ ಜಾರಿದ್ದರು. ಟಿಟಿ ವಾಹನದ ಹಿಂದಿನ ಡೋರ್ ಆಕಸ್ಮಿಕವಾಗಿ ತೆರೆದಿದ್ದರಿಂದ ಮಗು ಆಗುಂಬೆ ತಿರುವಿನ ಏಳನೇಯ ಕ್ರಾಸ್‍ನಲ್ಲಿ ಹೊರಗೆ ಬಿದ್ದಿದೆ. ಆದರೆ ವಾಹನದಲ್ಲಿ 8-10 ಮಂದಿ ಇದ್ದರೂ ಎಲ್ಲರೂ ಸಹ ನಿದ್ರೆಯಲ್ಲಿದ್ದರಿಂದ ಮಗು ಬಿದ್ದಿರುವುದು ತಿಳಿಯದೇ ಮುಂದೆ ತೆರಳಿದ್ದಾರೆ.

ಎನ್.ಆರ್ ಪುರ ಹೋಗುವಾಗ ಮಾರ್ಗ ಮಧ್ಯೆ ಕೊಪ್ಪ ಸಮೀಪಿಸುತ್ತಿದ್ದಂತೆ ಎಚ್ಚರಗೊಂಡ ಪೋಷಕರು ತಮ್ಮ ಮಗು ವಾಹನದಲ್ಲಿ ತಮ್ಮ ಜೊತೆ ಇಲ್ಲದಿರುವುದನ್ನು ಗಮನಿಸಿ ಗಾಬರಿಗೊಂಡು ತಕ್ಷಣ ಅದೇ ಮಾರ್ಗವಾಗಿ ಕಾರು ತಿರುಗಿಸಿಕೊಂಡು ಮಗುವನ್ನು ಹುಡುಕುತ್ತಾ ವಾಪಸ್ ಬಂದಿದ್ದಾರೆ. ಬರುವಾಗ ಆಗುಂಬೆ ಫಾರೆಸ್ಟ್ ಗೇಟ್‍ನಲ್ಲಿ ಮಗು ಠಾಣೆಯಲ್ಲಿ ಇರುವ ವಿಷಯ ಗೊತ್ತಾಗಿದೆ. ತಮ್ಮ ಮಗು ಠಾಣೆಯಲ್ಲಿರುವ ವಿಷಯ ತಿಳಿದ ಪೋಷಕರು ಠಾಣೆಗೆ ತೆರಳಿದ್ದಾರೆ. ಪೊಲೀಸರು ತಂದೆ-ತಾಯಿಗೆ ಎಚ್ಚರಿಕೆ ನೀಡಿ ಮಗುವನ್ನು ಪೋಷಕರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.

Comments

Leave a Reply

Your email address will not be published. Required fields are marked *