ಇಳಿ ವಯಸ್ಸಿನಲ್ಲೂ ಉತ್ಸಾಹದ ಚಿಲುಮೆ- ಸ್ವಚ್ಛತೆ, ಪರಿಸರದ ಕಾಳಜಿಗೆ ಒತ್ತು ನೀಡ್ತಿದ್ದಾರೆ ಮಂಡ್ಯದ ವಸ್ತೇಗೌಡ

ಮಂಡ್ಯ: ವಯಸ್ಸು 85 ಆದರೂ ಇವರದು ಬತ್ತದ ಉತ್ಸಾಹ. ಈ ಭೂಮಿ ಮೇಲೆ ಇರುವಷ್ಟು ದಿನ ಒಳ್ಳೆಯ ಕೆಲಸ ಮಾಡಬೇಕು ಎಂಬ ಸಹೃದಯ ಈ ಹಿರಿಯ ಚೇತನರದ್ದಾಗಿದೆ. ಅದಕ್ಕಾಗಿಯೇ 85 ನೇ ಇಳಿ ವಯಸ್ಸಲ್ಲೂ ಪ್ರತಿ ದಿನ ತಮ್ಮ ಕೈಲಾದ ಮಟ್ಟಿಗೆ ಸ್ವಚ್ಛತಾ ಕಾರ್ಯ ಮಾಡುತ್ತಾ ಯುವಜನತೆಗೆ ಮಾದರಿಯಾಗಿದ್ದಾರೆ.

ವಸ್ತೇಗೌಡ ಅವರಿಗೆ ಈಗ 85 ವರ್ಷ. ಆದರೂ ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳಲು ಇಷ್ಟವಿಲ್ಲದ ವಸ್ತೇಗೌಡರು, ನಿತ್ಯ ಮದ್ದೂರಿನ ಲೀಲಾವತಿ ಬಡಾವಣೆಯಲ್ಲಿರುವ ಪಾರ್ಕ್ ಮುಂಭಾಗ ಇರೋ ಅಶ್ವಥ ವೃಕ್ಷದ ಸುತ್ತಮುತ್ತ ಸ್ವಚ್ಛತೆ ಮಾಡುತ್ತಾರೆ.

ಸಹಕಾರಿ ಸಂಸ್ಥೆಯ ನಿವೃತ್ತ ನೌಕರರಾಗಿರುವ ವಸ್ತೇಗೌರಿಗೆ ಕಳೆದ ಮೂರುವರೆ ವರ್ಷದಿಂದ ನಿತ್ಯ ಇದೇ ಕೆಲಸ. ದಿನಾ ಬೆಳಗ್ಗೆಯೇ ಬಂದು ಉದ್ಯಾನವನದ ಮುಂಭಾಗ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಸ್ವಚ್ಛತಾ ಕಾರ್ಯದಲ್ಲಿ ತೊಡಗುತ್ತಾರೆ.

ವಸ್ತೇಗೌಡರ ಸಮಾಜಸೇವೆ ಇಷ್ಟಕ್ಕೆ ಸೀಮಿತವಾಗಿಲ್ಲ. ಉದ್ಯಾನದಲ್ಲಿರುವ ರಾಮನ ದೇವಾಲಯಕ್ಕೆ ಬರುವ ಭಕ್ತರಿಗಾಗಿ ನವಗ್ರಹ ಗಿಡಗಳನ್ನು ಬೆಳೆಸಿದ್ದಾರೆ. ಬಿಳಿ ಎಕ್ಕದ ಗಿಡ, ಮುತ್ತುಗದ ಗಿಡ, ಕಗ್ಗಲಿಗಿಡ, ಉತ್ತರಾಣೆ ಗಿಡ, ಅರಳೀ ಗಿಡ, ಹತ್ತಿಗಿಡ, ಬನ್ನಿಗಿಡ, ದರ್ಬೆ ಮತ್ತು ಗರಿಕೆಯನ್ನು ಬೆಳೆಸುತ್ತಾರೆ ಎಂದು ಪತ್ರಕರ್ತರಾದ ಶಿವನಂಜೇಗೌಡ ಹೇಳಿದ್ದಾರೆ.

ಹಿರಿವಯಸ್ಕರಾದ ವಸ್ತೇಗೌಡರು ನಿಜವಾದ ಅರ್ಥದಲ್ಲಿ ಸಮಾಜಸೇವಕರು. ಸ್ವಚ್ಛತೆ ಜೊತೆಗೆ ಪರಿಸರ ಮೇಲಿನ ಇವರ ಕಾಳಜಿಯನ್ನು ನೋಡಿ ಇತರರು ಕಲಿಯಬೇಕಾಗಿದೆ.

https://www.youtube.com/watch?v=VASe1oyVqp0

Comments

Leave a Reply

Your email address will not be published. Required fields are marked *