ಬಾಲಿವುಡ್ ತಾರೆಯರಿಗೆ, ಉದ್ಯಮಿಗಳಿಗೆ ಮುಲಾಜಿಲ್ಲದೆ ಜಾಡಿಸಿ ನೋಟಿಸ್ ನೀಡಿದ ಕನ್ನಡಿಗ

– ಮುಂಬೈಯಲ್ಲಿ ಸದ್ದು ಮಾಡಿದ ಹಾಸನ ಜಿಲ್ಲೆಯ ವರುಣ್ ರಂಗಸ್ವಾಮಿ

ಹಾಸನ: ದೇಶದ ಪ್ರಮುಖ ವಾಣಿಜ್ಯ ನಗರ ಮುಂಬೈಯಲ್ಲಿ (Mumbai) ತೆರಿಗೆ ಕಳ್ಳರು ಜಾಸ್ತಿ. ಹೆಚ್ಚಿನದಾಗಿ ಉದ್ಯಮಿಗಳು, ನಂ.1 ನಟ ನಟಿಯರು, ರಾಜಕಾರಣಿಗಳು ಅನೇಕ ಮಂದಿ ಸರ್ಕಾರಕ್ಕೆ ತೆರಿಗೆ ವಂಚಿಸುತ್ತಾರೆ. ಅವರ ಪ್ರಭಾವಕ್ಕೆ ಅಧಿಕಾರಿಗಳು ಮುಟ್ಟಲು ಹಿಂಜರಿಯುತ್ತಾರೆ.

ಇಂತಹ ಸನ್ನಿವೇಶದಲ್ಲಿ ದಕ್ಷತೆಯಿಂದ ಕಾರ್ಯನಿರ್ವಹಿಸಲು ಜಿಎಸ್‌ಟಿ (GST) ವಿಭಾಗದ ಹಿರಿಯ ಅಧಿಕಾರಿಗಳು ಆಯ್ದುಕೊಂಡಿದ್ದು ಕನ್ನಡಿಗ ಯುವ ಅಧಿಕಾರಿಯನ್ನು. ಹೀಗೆ ಆಯ್ಕೆಯಾಗಿ ಜಂಟಿ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಅವರು ಬಾಲಿವುಡ್‌ನ ದೊಡ್ಡ ತಾರೆಯರು, ಉದ್ಯಮಿಗಳಿಗೆ ಮುಲಾಜಿಲ್ಲದೆ ನೋಟೀಸ್ ನೀಡಿದರು. ಸರ್ಕಾರಕ್ಕೆ ಬರಬೇಕಿದ್ದ ತೆರಿಗೆಯನ್ನು ತ್ವರಿತ ಗತಿಯಲ್ಲಿ ವಸೂಲು ಮಾಡಿದರು. ಹೀಗೆ ಮುಂಬೈಯಲ್ಲಿ ಸದ್ದು ಮಾಡಿದ ಐಆರ್‌ಎಸ್ ಅಧಿಕಾರಿ (IRS Officer) ಅರಕಲಗೂಡಿನ ವರುಣ್ ರಂಗಸ್ವಾಮಿ.

ವರುಣ್ ರಂಗಸ್ವಾಮಿ (Varun Rangaswamy) ಅರಕಲಗೂಡು ತಾಲೂಕಿನ, ಮಗ್ಗೆ ಗ್ರಾಮದವರು. ಪ್ರಸ್ತುತ ಮುಂಬೈ ಜಿಎಸ್‌ಟಿ ವಿಭಾಗದ ಜಂಟಿ ಆಯುಕ್ತರಾಗಿ ಸೇವೆಯಲ್ಲಿದ್ದಾರೆ. ಬೆಂಗಳೂರಿನಲ್ಲಿ ಜಿಎಸ್‌ಟಿ ಆಯುಕ್ತರಾಗಿದ್ದಾಗ ಆಡಳಿತದಲ್ಲಿ ಕನ್ನಡ ಬಳಕೆ, ಸರಳ ನಡವಳಿಕೆಯಿಂದ ಸೆಳೆದಿದ್ದರು. ಶಾಲಾ, ಕಾಲೇಜು ಶಿಕ್ಷಣವನ್ನು ಹಾಸನ, ಪುತ್ತೂರಿನಲ್ಲಿ ಪೂರ್ಣಗೊಳಿಸಿ ಬೆಂಗಳೂರಿನ ಎಂಎಸ್‌ಆರ್‌ಐಟಿಯಿಂದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್‌ನಲ್ಲಿ ಸ್ನಾತಕ ಪದವಿ ಪಡೆದಿದ್ದಾರೆ.

ಪ್ರಸ್ತುತ ಇವರು ಬೆಂಗಳೂರಿನ ಪ್ರತಿಷ್ಠಿತ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಿಂದ ವ್ಯವಹಾರ ಕಾನೂನಿನಲ್ಲಿ ಸ್ನಾತಕ ಪದವಿಗೆ ಅಧ್ಯಯನ ಮಾಡುತ್ತಿದ್ದಾರೆ. 2012ರಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ವರುಣ್ ರಂಗಸ್ವಾಮಿ ಭಾರತೀಯ ಕಂದಾಯ ಸೇವೆಗೆ ಆಯ್ಕೆಯಾಗಿ, ಹಣಕಾಸು ಸಚಿವಾಲಯದಲ್ಲಿ ಸೇವೆಗೆ ನಿಯೋಜನೆಗೊಂಡರು. ನಂತರ ತಮಿಳುನಾಡು ಕಳ್ಳಸಾಗಣೆ ವಿರೋಧಿ ಘಟಕದಲ್ಲಿ ಸಹಾಯಕ ಆಯುಕ್ತರಾಗಿ ವೃತ್ತಿ ಜೀವನ ಆರಂಭಿಸಿದರು. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲೇ ಯತ್ನಾಳ್‍ಗೆ ಬೊಮ್ಮಾಯಿ ತಿರುಗೇಟು

ಚಿನ್ನ ಮತ್ತು ಮಾದಕ ವಸ್ತುಗಳನ್ನು ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಕಾರೈಕಲ್ ಮತ್ತು ನಾಗಪಟ್ಟಣಂ ಬಂದರುಗಳ ಮೇಲ್ವಿಚಾರಣೆಯ ಹೊಣೆಗಾರಿಕೆಯಲ್ಲಿದ್ದಾಗ ಕಳ್ಳಸಾಗಾಣಿಕೆ ತಡೆಗಟ್ಟುವಿಕೆ ಮತ್ತು ಸಮುದ್ರದಲ್ಲಿ ಗಸ್ತು ತಿರುಗುವಿಕೆಯನ್ನು ಬಿಗಿಗೊಳಿಸಿದರು. 2016 ರಲ್ಲಿ ಉಪ ಆಯುಕ್ತರಾಗಿ ಬಡ್ತಿ ಪಡೆದು ಟುಟಿಕೋರಿನ್‌ಗೆ ವರ್ಗಾವಣೆಯಾಗಿದರು. ಆದಾಯ ಸಂಗ್ರಹದಲ್ಲಿ ಹೆಚ್ಚಳ, ನಕಲಿ ರಫ್ತುಗಳಿಗೆ ತಡೆವೊಡ್ಡಿ ಕಳ್ಳದಂಧೆಗಳನ್ನು ಮಟ್ಟಹಾಕಿದರು. ಉಗಾಂಡದಲ್ಲಿ ನಡೆದ ಕಸ್ಟಮ್ಸ್ ಅಧಿಕಾರಿಗಳ ಸಮ್ಮೇಳನದಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿದ ವರುಣ್ ರಂಗಸ್ವಾಮಿ ಸೇವಾ ದಕ್ಷತೆಗಾಗಿ ಪ್ರಶಂಸೆ ಪಡೆದಿದ್ದಾರೆ.

2018ರಲ್ಲಿ ಜಿಎಸ್‌ಟಿ ತನಿಖಾ ಘಟಕದ ಉಪಆಯುಕ್ತರಾಗಿ ಬೆಂಗಳೂರಿಗೆ ವರ್ಗಾವಣೆಯಾದರು. ನಂತರ ಇವರ ಸಾಮರ್ಥ್ಯ ಮತ್ತು ಸೇವಾ ದಕ್ಷತೆಯನ್ನು ಪರಿಗಣಿಸಿ ಜಿಎಸ್‌ಟಿ ತೆರಿಗೆಗಳ ಜಂಟಿ ಆಯುಕ್ತರಾಗಿ ಮುಂಬೈಗೆ ವರ್ಗಾಯಿಸಲಾಗಿದೆ. ಅಲ್ಲಿಯೂ ಯಶಸ್ವಿ ಕಾರ್ಯಾಚರಣೆ ಮತ್ತು ಪ್ರಾಮಾಣಿಕ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ: ಗೃಹಜ್ಯೋತಿಗೆ ಭರ್ಜರಿ ನೋಂದಣಿ- 8 ದಿನದಲ್ಲಿ 51 ಲಕ್ಷ ಮಂದಿ ಅರ್ಜಿ ಸಲ್ಲಿಕೆ