ಶೌಚಾಲಯಕ್ಕೆ ತೆರಳುತ್ತಿದ್ದ ದಲಿತ ವಿದ್ಯಾರ್ಥಿನಿ ತಡೆದ ವಿವಿ ಭದ್ರತಾ ಸಿಬ್ಬಂದಿ

ಲಕ್ನೋ: ದಲಿತ ಎಂಬ ಕಾರಣಕ್ಕೆ ಕ್ಯಾಂಪಸ್‍ನಲ್ಲಿರುವ ಶೌಚಾಲಯಕ್ಕೆ ತೆರಳುತ್ತಿದ್ದ ವಿದ್ಯಾರ್ಥಿನಿಯನ್ನು ಭದ್ರತಾ ಸಿಬ್ಬಂದಿ ತಡೆದಿರುವ ಘಟನೆ ಉತ್ತರ ಪ್ರದೇಶದ ಬನಾರಸ್ ಹಿಂದೂ ವಿಶ್ವವಿದ್ಯಾಲಯ(ಬಿಎಚ್‍ಯು)ದಲ್ಲಿ ನಡೆದಿದೆ.

ವಿದ್ಯಾರ್ಥಿನಿ ಕಾಲೇಜಿನ ಹೊಸ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು ಕಳೆದ ಐದು ದಿನಗಳಿಂದ ಮಹಿಳಾ ಮಹಾವಿದ್ಯಾಲಯದ ಆವರಣದ ಸಮೀಪವಿರುವ ಬಹುಜನ ಹೆಲ್ಪ್ ಡೆಸ್ಕ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದಳು. ಈ ವೇಳೆ ಮಹಿಳಾ ಮಹಾವಿದ್ಯಾಲಯದ ಹತ್ತಿರವಿರುವ ಶೌಚಾಲಯಕ್ಕೆ ಹೋಗಿದ್ದಾಳೆ. ಆಗ ಭದ್ರತಾ ಸಿಬ್ಬಂದಿ ಆಕೆಯನ್ನು ತಡೆದು, ಇಲ್ಲಿ ಶೌಚಾಲಯಕ್ಕೆ ಹೋಗಲು ಅವಕಾಶವಿಲ್ಲ. ಹತ್ತಿರದಲ್ಲಿರುವ ಆಸ್ಪತ್ರೆ ಅಥವಾ ಕಾಲೇಜು ಕ್ಯಾಂಪಸ್‍ನಲ್ಲಿರುವ ಶೌಚಾಲಯಕ್ಕೆ ತೆರಳುವಂತೆ ಸೂಚಿಸಿದ್ದಾರೆ.

ಆಗ ವಿದ್ಯಾರ್ಥಿನಿ ಪಟ್ಟು ಬಿಡೆದೆ ವಾದಿಸಿದ್ದಾಳೆ. ಭದ್ರತಾ ಸಿಬ್ಬಂದಿ ವರ್ತನೆಯು ತಾರತಮ್ಯ, ಅಮಾನವೀಯ ಹಾಗೂ ಕಾನೂನು ಬಾಹಿರವಾಗಿತ್ತು. ಭದ್ರತಾ ಸಿಬ್ಬಂದಿ ವಿರುದ್ಧ ಕೂಡಲೇ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ವಿವಿ ಆಡಳಿತ ಮುಖ್ಯಸ್ಥ ಓಪಿ ರೈ ಅವರಿಗೆ ನೀಡಿದ ಲಿಖಿತ ದೂರಿನಲ್ಲಿ ವಿದ್ಯಾರ್ಥಿನಿ ಒತ್ತಾಯಿಸಿದ್ದಾಳೆ.

ದೂರು ನೀಡಿರುವ ವಿದ್ಯಾರ್ಥಿನಿ ಈ ಕುರಿತು ಪ್ರತಿಕ್ರಿಯಿಸಿ, ಕಲಾ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದು, ಬಿಎಚ್‍ಯುವ ಎಸ್‍ಸಿ, ಎಸ್‍ಟಿ ವಿದ್ಯಾರ್ಥಿಗಳ ಕಾರ್ಯಕ್ರಮ ಸಂಘಟನಾ ಸಮಿತಿಯ ಸದಸ್ಯೆಯಾಗಿದ್ದೇನೆ. ಕಾಲೇಜಿನ ಹೊಸ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು ಕಳೆದ ಐದು ದಿನಗಳಿಂದ ಮಹಿಳಾ ಮಹಾವಿದ್ಯಾಲಯದ ಆವರಣದ ಸಮೀಪವಿರುವ ಬಹುಜನ ಹೆಲ್ಪ್ ಡೆಸ್ಕ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ವಿವರಿಸಿದ್ದಾಳೆ.

ವಿದ್ಯಾರ್ಥಿನಿಯ ಆರೋಪವನ್ನು ತಳ್ಳಿ ಹಾಕಿರುವ ಭದ್ರತಾ ಸಿಬ್ಬಂದಿ ಆಕೆ ಪುರುಷರ ಶೌಚಾಲಯಕ್ಕೆ ಹೊರಟಿದ್ದರು. ಹೀಗಾಗಿ ತಡೆದೆ ಎಂದು ತಿಳಿಸಿದ್ದಾರೆ. ಈ ಕುರಿತು ತನಿಖೆ ನಡೆಸುವಂತೆ ವಿವಿ ಆಡಳಿತ ಮುಖ್ಯಸ್ಥ ಓಪಿ ರೈ ಅವರು ಮೂವರು ಸದಸ್ಯರ ಸಮಿತಿ ರಚಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ರೈ, ವಿದ್ಯಾರ್ಥಿನಿಯ ದೂರು ಸ್ವೀಕರಿಸಿದ್ದು, ಆಕೆಯ ಕುಂದು ಕೊರತೆಗಳನ್ನು ಕೇಳಲು ವೈಯಕ್ತಿಕವಾಗಿ ವಿಚಾರಣೆ ನಡೆಸಿ ಮಾಹಿತಿ ಪಡೆದಿದ್ದೇವೆ. ಈ ಕುರಿತು ಆರೋಪಿಗಳಾದ ಭದ್ರತಾ ಸಿಬ್ಬಂದಿಯನ್ನೂ ಕರೆದು ವಿಚಾರಣೆ ನಡೆಸಲಾಗಿದೆ. ವಿದ್ಯಾರ್ಥಿನಿಯು ಪುರುಷರ ಶೌಚಾಲಯಕ್ಕೆ ಪ್ರವೇಶಿಸುತ್ತಿದ್ದರಿಂದ ತಡೆದೆವು ಅಷ್ಟೆ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಕರಣದ ತನಿಖೆ ನಡೆಸಲು ಇಬ್ಬರು ಮಹಿಳಾ ಅಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ರಚಿಸಿದ್ದೇವೆ. ಸಮಿತಿಯ ವರದಿಯನ್ನಾಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *