3 ದಿನಗಳ ಹಿಂದೆ ಉದ್ಘಾಟನೆಗೊಂಡಿದ್ದ ವಂದೇ ಭಾರತ್ ರೈಲಿಗೆ ಮಳೆಯಿಂದ ಹಾನಿ – ಸಂಚಾರ ಸ್ಥಗಿತ

ಭುವನೇಶ್ವರ: ಕೇವಲ 3 ದಿನಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದ ಉದ್ಘಾಟನೆಗೊಂಡಿದ್ದ ಒಡಿಶಾದ (Odisha) ಮೊಲದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (Vande Bharat Express Train) ಭಾನುವಾರ ಭಾರೀ ಮಳೆಯ (Rain) ಹಿನ್ನೆಲೆ ಹಾನಿಗೊಂಡಿದೆ. ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಕಳೆದ ವಾರ ಒಡಿಶಾದ ಪುರಿ ಹಾಗೂ ಹೌರಾ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ನರೇಂದ್ರ ಮೋದಿ ಉದ್ಘಾಟಿಸಿದ್ದರು. ಕಳೆದ ದಿನ ಗುಡುಗು, ಮಿಂಚಿನಿಂದಾಗಿ ಸುರಿದಿರುವ ಆಲಿಕಲ್ಲು ಮಳೆಯಿಂದಾಗಿ ರೈಲಿಗೆ ಹಾನಿಯಾಗಿದೆ. ಬಳಿಕ ರೈಲನ್ನು ದುಲಾಖಪಟ್ಟಣ-ಮಂಜುರಿ ಮಾರ್ಗದ ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ. ಬಿರುಗಾಳಿಗೆ ಮರವೊಂದು ರೈಲಿನ ಓವರ್‌ಹೆಡ್ ತಂತಿಯ ಮೇಲೆ ಬಿದ್ದ ಪರಿಣಾಮ ಪ್ಯಾಂಟ್ರೋಗ್ರಾಫ್ ಮುರಿದಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ರೈಲನ್ನು ಸುಮಾರು 4 ಗಂಟೆಗಳ ಕಾಲ ನಿಲ್ಲಿಸಿದ ಬಳಿಕ ಅದನ್ನು ಡೀಸೆಲ್ ಎಂಜಿನ್‌ನ ಸಹಾಯದಿಂದ ಚಲಾಯಿಸಲಾಗಿದೆ. ಸೋಮವಾರ ನಸುಕಿನ ಜಾವ ರೈಲು ಹೌರಾ ನಿಲ್ದಾಣ ತಲುಪಿದೆ.

ಇದಕ್ಕೂ ಮುನ್ನ ಅಧಿಕಾರಿಗಳು ರೈಲಿಗಾಗಿರುವ ಹಾನಿಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಗುಡುಗು ಸಹಿತ ಮಳೆಯಿಂದಾಗಿ ಚಾಲಕನ ಕ್ಯಾಬಿನ್‌ನ ಮುಂಭಾಗದ ಗಾಜು ಹಾಗೂ ಪಕ್ಕದ ಕಿಟಕಿಗಳು ಒಡೆದಿರುವುದು ಕಂಡುಬಂದಿದೆ. ವಿದ್ಯುತ್ ಸರಬರಾಜು ಕೂಡಾ ಕಡಿತಗೊಂಡಿದ್ದು, ಸದ್ಯ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ನಿಲ್ದಾಣದ ವ್ಯವಸ್ಥಾಪಕರು ತಿಳಿಸಿದ್ದಾರೆ. ಇದನ್ನೂ ಓದಿ: ಅಂಡರ್ ಪಾಸ್‌ನಲ್ಲಿ ಸಿಲುಕಿದ್ದ ಐವರ ರಕ್ಷಣೆ – ಪಬ್ಲಿಕ್ ಟಿವಿ ಡ್ರೈವರ್‌ಗೆ ಬಹುಮಾನ ಘೋಷಣೆ

ಭಾನುವಾರ ಗುಡುಗು ಸಹಿತ ಮಳೆಯಿಂದ ಉಂಟಾಗಿರುವ ಹಾನಿಗೆ ದುರಸ್ತಿಗಾಗಿ ಹೌರಾ-ಪುರಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಸೋಮವಾರ ರದ್ದುಗೊಳಿಸಲಾಗಿದೆ ಎಂದು ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಅಂಡರ್ ಪಾಸ್‌ನಲ್ಲಿ ಟೆಕ್ಕಿ ಸಾವು – ದುರ್ಘಟನೆ ಬಳಿಕ ಎಚ್ಚೆತ್ತ BBMP