ನನ್ನನ್ನು ಮಠದಿಂದ ಹೊರಹಾಕಲು ಷಡ್ಯಂತ್ರ: ಮೀಟೂ ಆರೋಪಕ್ಕೆ ವನಕಲ್ಲು ಸ್ವಾಮೀಜಿ ಸ್ಪಷ್ಟನೆ

ಬೆಂಗಳೂರು: ತನ್ನ ಮೇಲೆ ಬಂದಿರುವ ಮೀಟೂ ಆರೋಪಕ್ಕೆ ನೆಲಮಂಗಲ ತಾಲೂಕಿನ ವನಕಲ್ಲು ಮಠದ ಶ್ರೀ ಬಸವ ರಮಾನಂದ ಸ್ವಾಮೀಜಿ ಸಂತ್ರಸ್ತ ಮಹಿಳೆಗೆ ಬಹಿರಂಗ ಚರ್ಚೆಗೆ ಬರುವಂತೆ ಸವಾಲು ಹಾಕಿದ್ದಾರೆ.

ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ವಣಕಲ್ಲು ಮಲ್ಲೇಶ್ವರ ಮಠಕ್ಕೆ ನಾನು 2012ರಲ್ಲಿ ಬಂದಿದ್ದೆ. ಅಂದಿನಿಂದಲೂ ನನ್ನ ವಿರುದ್ಧ ಕೆಲವರು ಹಗೆ ಸಾಧಿಸುತ್ತಿದ್ದರು. ಅಲ್ಲದೇ ನನ್ನ ಮಠವನ್ನು ಬಿಟ್ಟು ಹೋಗುವಂತೆ ಕೆಲವರು ಬೆದರಿಕೆ ಹಾಕಿದ್ದರು. ಹೀಗಾಗಿ ಇದೇ ಉದ್ದೇಶದಿಂದ ಮಹಿಳೆಯ ಮೂಲಕ ಈ ಆರೋಪವನ್ನು ಮಾಡಿಸಿದ್ದಾರೆ ಎಂದು ಪ್ರತಿಕ್ರಿಯಿಸಿದರು.

ಆ ಮಹಿಳೆಯನ್ನು ಬಹಿರಂಗ ಚರ್ಚೆಗೆ ಕರೆಸಿ, ನಾನು ಚರ್ಚೆಗೆ ಸಿದ್ಧನಿದ್ದೇನೆ. ನನ್ನನ್ನು ಮಠದಿಂದ ಹೊರಹಾಕಿಸಲು ಷಡ್ಯಂತ್ರ ರೂಪಿಸಿದ್ದಾರೆ. ಸನ್ಯಾಸತ್ವವನ್ನು ಸ್ವೀಕರಿಸುವ ನಾನು ಪರಮಾತ್ಮ ಆಣೆಯಾಗಿಯೂ ಆ ರೀತಿ ನಡೆದುಕೊಂಡಿಲ್ಲ. ವಣಕಲ್ಲು ಜಾತ್ರೆ ಸಂದರ್ಭ ಆ ಮಹಿಳೆ ನಮ್ಮ ಮಠಕ್ಕೆ ಬಂದಿದ್ದರು. ಅಲ್ಲದೇ ವಿದ್ಯಾರ್ಥಿಗಳ ಎದುರೇ ತಮ್ಮ ಫೋಟೋವನ್ನು ನನ್ನ ಬಳಿ ತೆಗೆಸಿಕೊಂಡಿದ್ದರು. ಅದನ್ನು ಸಹ ನಮ್ಮ ಮಠದ ವಿದ್ಯಾರ್ಥಿಗಳೇ ತೆಗೆದಿದ್ದಾರೆ. ಅಲ್ಲದೇ ಆಕೆಯು ಅತ್ಯಾಚಾರ ಯತ್ನಕ್ಕೆ ಮುಂದಾಗಿದ್ದರು ಎಂದು ದೂರನ್ನು ನೀಡಿದ್ದಾರೆ.

ಪಬ್ಲಿಕ್ ಟಿವಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಸಂತ್ರಸ್ತ ಮಹಿಳೆ ದ್ವಂದ್ವ ಹೇಳಿಕೆಗಳನ್ನು ನೀಡಿದ್ದಾರೆ. ಮೊದಲು ಸ್ವಾಮೀಜಿ ನನ್ನನ್ನು ಅತ್ಯಾಚಾರ ಮಾಡಿದ್ದಾರೆಂದು ಹೇಳಿದರೆ, ಮತ್ತೊಮ್ಮೆ ಅತ್ಯಾಚಾರಕ್ಕೆ ಪ್ರಯತ್ನಪಟ್ಟರು ಎಂದು ಹೇಳಿದ್ದಾರೆ. ಅಲ್ಲದೇ ಅವರು ವಾಟ್ಸಪ್ ಮಾಡುತ್ತಿದ್ದ ಮೆಸೇಜ್ ಗಳು ನನ್ನ ಹತ್ತಿರ ಇದೆ ಎಂದು ಹೇಳಿದ್ದಾರೆ.

ಸಂತ್ರಸ್ತ ಮಹಿಳೆಯ ವಿಡಿಯೋದಲ್ಲಿ ಏನಿದೆ?
ವನಕಲ್ಲು ಮಠ ನಮ್ಮ ಮನೆಯ ದೇವರು. ಹಾಗಾಗಿ ನಾನು ಹಲವು ನನ್ನ ಕುಟುಂಬಸ್ಥರೊಂದಿಗೆ ಮಠಕ್ಕೆ ಭೇಟಿ ನೀಡಿದ್ದೇನೆ. ಫೆಬ್ರವರಿ 24ರಂದು ಜಾತ್ರೆಗೆ ಹೋದಾಗ ಸ್ವಾಮೀಜಿ ಭೇಟಿ ಮತ್ತು ಪರಿಚಯ ಆಯ್ತು. ಈ ವೇಳೆ ಕೆಲಸ ಕೊಡಿಸುತ್ತೇನೆ ಅಂತಾ ಹೇಳಿ ನನ್ನ ಮೊಬೈಲ್ ನಂಬರ್ ಪಡೆದರು. ಒಂದು ದಿನ ಕೆಲಸದ ನಿಮಿತ್ತ ಅಂತಾ ಹೇಳಿ ನನ್ನ ಫೋಟೊ ಕಳುಹಿಸಿದೆ. ಅವರು ತಮ್ಮ ಫೋಟೋ ಕಳುಹಿಸಿದರು. ಸತತವಾಗಿ ಒಂದೂವರೆ ತಿಂಗಳು ನನ್ನ ಜೊತೆ ಸ್ವಾಮೀಜಿಗಳು ಮಾತನಾಡಿದ್ದಾರೆ.

ಕೆಲಸ ಕೊಡಿಸುತ್ತೇನೆ ಎಂಬ ಭರವಸೆ ನೀಡಿದ ಸ್ವಾಮೀಜಿ ಒಮ್ಮೆ ನಾನು ನಿನ್ನನ್ನು ಭೇಟಿ ಮಾಡಬೇಕೆಂದು ಹೇಳಿದರು. ನಿಮ್ಮನ್ನ ನೋಡದೆ ಕೆಲಸ ಕೊಡಿಸಲು ಸಾಧ್ಯವಿಲ್ಲ. ಹಾಗಾಗಿ ಒಂದು ಸಾರಿ ಬಂದು ಭೇಟಿ ಆಗಬೇಕು ಅಂತಾ ಫೋನ್ ನಲ್ಲಿ ತಿಳಿಸಿದರು. ಸ್ವಾಮೀಜಿಯನ್ನು ಭೇಟಿ ಮಾಡಲು ಮಠಕ್ಕೆ ತೆರಳಿದರೆ ಆರಂಭದಲ್ಲಿ ಒಂದು ವಾರ ನನಗೆ ಸಿಗಲಿಲ್ಲ. ಈ ವೇಳೆ ವಾಟ್ಸಪ್ ನಲ್ಲಿ ಮೆಸೇಜ್ ಮಾಡುತ್ತಿದ್ದರು. ಒಂದು ದಿನ ಸಂಜೆ 4 ಗಂಟೆಗೆ ಭೇಟಿ ಅಗ್ತೀನಿ ಅಂದರು. ಸಂಜೆ ಮಠಕ್ಕೆ ಹೋದಾಗ ಅರ್ಧ ಗಂಟೆಯಲ್ಲಿ ಸಿಗುತ್ತೇನೆ. ಸ್ವಲ್ಪ ತಡವಾದರೂ ಪರವಾಗಿಲ್ಲ, ಬೇರೆ ರೂಮ್ ಮಾಡಿಸಿಕೊಡುತ್ತೇನೆ ಅಲ್ಲೇ ಇರು ಅಂತಾ ಹೇಳಿದರು. ಅಂದು ಭೇಟಿಯಾದ ಸ್ವಾಮೀಜಿ ನನ್ನ ಬಗ್ಗೆ ಎಲ್ಲ ಮಾಹಿತಿಯನ್ನು ಕೇಳಿದರು. ಮುಂದೆ ನನಗೆ ಸಹಾಯಕಿಯಾಗಿ ಕೆಲಸ ಮಾಡಿಕೊಂಡಿರು ಅಂತಾ ಹೇಳಿದರು.

ಕೆಲಸಕ್ಕೆ ಸಂಬಂಧಿಸಿದ ಮಾತು ಮುಗಿಯುತ್ತಿದ್ದಂತೆ ಅವರ ಬೆಡ್ ರೂಮ್ ನಲ್ಲಿ ಚಾರ್ಜ್ ಹಾಕಿರುವ ಮೊಬೈಲ್ ತೆಗೆದುಕೊಂಡು ಬಾ ಅಂತಾ ಅಲ್ಲಿ ಕಳುಹಿಸಿದರು. ನಾನು ಕೋಣೆ ಪ್ರವೇಶಿಸುತ್ತಿದ್ದಂತೆ ಹಿಂದಿನಿಂದ ಬಂದು ಬಾಗಿಲು ಹಾಕಿಕೊಂಡರು. ಅಲ್ಲದೇ ನನ್ನ ಸೀರೆ ಎಳೆದು ಅತ್ಯಾಚಾರಕ್ಕೆ ಯತ್ನಿಸಿದರು. ಈ ವೇಳೆ ನನಗೆ ಏನು ಮಾತಾಡೋದಕ್ಕೆ ಸಾಧ್ಯವಾಗಲಿಲ್ಲ ಎಂದು ಸಂತ್ರಸ್ತೆ ವಿಡಿಯೋದಲ್ಲಿ ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *