ವಾಲ್ಮೀಕಿ ನಿಗಮ ಅಕ್ರಮ – ಸಿಎಂ ರಾಜೀನಾಮೆಗೆ ಎನ್.ರವಿಕುಮಾರ್ ಒತ್ತಾಯ

ಬೆಂಗಳೂರು: ವಾಲ್ಮೀಕಿ ನಿಗಮ ಅಕ್ರಮದ (Valmiki Corporation Scam) ವಿಚಾರವಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ (Siddaramaiah) ಘನತೆ, ಗೌರವ ಹಾಗೂ ನೈತಿಕತೆ ಇದ್ದರೆ ಮೊದಲು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿಧಾನಪರಿಷತ್‍ನ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ (N.Ravikumar) ಅವರು ಆಗ್ರಹಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ (BJP) ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಬ್ಯಾಂಕ್ ಆಫ್ ಬರೋಡದಿಂದ 144 ಕೋಟಿ ರೂ. ಓವರ್ ಡ್ರಾಫ್ಟ್ (ಸಾಲ) ಪಡೆಯಲಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಸಂಬಂಧ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಗೆ ಇದನ್ನು ಪಡೆಯಲಾಯಿತೇ? ಆ ಕಂಪನಿಗಳಿಗೆ ಚುನಾವಣೆ ವೇಳೆ ಯಾಕೆ ಹಣ ಹಾಕಿದ್ದೀರಿ? ಆ ಕಂಪನಿಗಳ ಮಾಲೀಕರು ಯಾರು? ಆ ಕಂಪನಿಗಳಿಗೆ, ಡಿ.ಕೆ ಶಿವಕುಮಾರ್ (D.K Shivakumar), ನಾಗೇಂದ್ರರಿಗೆ ಹಾಗೂ ಸಿದ್ದರಾಮಯ್ಯ ಅವರಿಗೆ ಏನು ಸಂಬಂಧ ಎಂದು ಅವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆ – ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಸೇರಿ 8 ಮಂದಿಗೆ ಟಿಕೆಟ್‌

ಈ ಓವರ್ ಡ್ರಾಫ್ಟ್ ಪಡೆಯಲು ಕ್ಯಾಬಿನೆಟ್ ನಿರ್ಣಯ ಏಕೆ ಮಾಡಿಲ್ಲ? ಇದರೊಳಗೆ ನಾಗೇಂದ್ರ ಮಾತ್ರವಲ್ಲದೆ ಅನೇಕ ಅಧಿಕಾರಿಗಳಿದ್ದಾರೆ. ತೆಲಂಗಾಣದಲ್ಲಿ ಚುನಾವಣೆಗೆ ನಿಂತ ಅನೇಕ ಅಭ್ಯರ್ಥಿಗಳೂ ಇದರಲ್ಲಿದ್ದಾರೆ. ಹಣ ಕೊಟ್ಟ ಅನೇಕ ಮಂತ್ರಿಗಳೂ ಕರ್ನಾಟಕದಲ್ಲಿದ್ದಾರೆ. ಇದೊಂದು ಅಂತರರಾಜ್ಯ ಭ್ರಷ್ಟಾಚಾರ. ಆದ್ದರಿಂದ ಸಿಬಿಐ ತನಿಖೆ ನಡೆಸಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.

ಪರಿಶಿಷ್ಟ ಪಂಗಡದ ಜನರ ಅಭಿವೃದ್ಧಿಗಾಗಿ ಇರುವ ವಾಲ್ಮೀಕಿ ಅಭಿವೃದ್ಧಿ ನಿಗಮವು ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಬಳಿಕ ವ್ಯಾಪಾರ ಮಾಡುವ ನಿಗಮವಾಗಿ ಪರಿವರ್ತನೆಯಾಗಿದೆ. ನಿಗಮವು ಐಟಿ ಕಂಪನಿಗೆ ಸಾಲ ಕೊಡುವ ಕೆಲಸ ಮಾಡುವುದಿಲ್ಲ. ಆದರೆ, ಈ ನಿಗಮವು 6+9 ಕಂಪನಿಗಳಿಗೆ ಹಣ ಕೊಟ್ಟಿದೆ. ಆ ಕಂಪನಿಗಳು ಯಾವುವು? ಅವರ ಟ್ರ್ಯಾಕ್ ರೆಕಾರ್ಡ್ ಏನು? ಅವರಿಗೆ ಯಾಕೆ ಹಣ ಕೊಟ್ಟಿದ್ದೀರಿ ಎಂದು ಸಿಎಂಗೆ ಪ್ರಶ್ನಿಸಿದ್ದಾರೆ.

ಸಾಲ ಕೊಡಲು ಅನುಮತಿ ಕೊಟ್ಟವರು ಯಾರು? ಈ ಬಗ್ಗೆ ಸಚಿವ ಸಂಪುಟದಲ್ಲಿ ನಿರ್ಧಾರ ಆಗಿತ್ತೇ? ಸಿಎಂ, ಡಿಸಿಎಂಗೆ ಗೊತ್ತಿದ್ದೇ ಇದು ನಡೆದಿದೆ. ಅದನ್ನು ಮುಚ್ಚಿಡುತ್ತಿದ್ದಾರೆ. ಪ್ರಾಮಾಣಿಕ ಅಧಿಕಾರಿ ಚಂದ್ರಶೇಖರ್ ಅವರು ಆತ್ಮಹತ್ಯೆ ಮಾಡಿಕೊಂಡ ಬಳಿಕ ಇದು ಹೊರಕ್ಕೆ ಬಂದಿದೆ. ಈ ಸರ್ಕಾರ ಒಬ್ಬ ಪ್ರಾಮಾಣಿಕ ಅಧಿಕಾರಿಯನ್ನು ಬಲಿ ಪಡೆದಿದೆ ಎಂದು ಅವರು ಕಟುವಾಗಿ ಟೀಕಿಸಿದ್ದಾರೆ.

ಉಗ್ರಗಾಮಿಗಳನ್ನು ಸಾಕಿ ಬೆಳೆಸುವ ಸರ್ಕಾರ
ಕಳ್ಳರು, ಖದೀಮರು, ಭಯೋತ್ಪಾದಕರು, ಉಗ್ರಗಾಮಿಗಳನ್ನು ಸಾಕಿ ಬೆಳೆಸುವ ಸರ್ಕಾರ ಇದು. ಪ್ರಾಮಾಣಿಕ ಅಧಿಕಾರಿ- ಸಿಬ್ಬಂದಿಗೆ ಸಹಾಯ ಮಾಡುವ ಸರ್ಕಾರ ಇದಲ್ಲ. ಇದು ಗೂಂಡಾಗಳ, ಭಯೋತ್ಪಾದಕರ ಕೇಸು ರದ್ದು ಮಾಡುವ ಸರ್ಕಾರ. ಕಳ್ಳ ಖದೀಮರ ಸರಕಾರ ಎಂದು ಅವರು ಕಿಡಿಕಾರಿದ್ದಾರೆ.

ಕಾಂಗ್ರೆಸ್ಸಿನ ಅನುಕೂಲ ಸಿಂಧು ನೀತಿ
ಭಾರತದಲ್ಲಿ ನಡೆದ ಚುನಾವಣೆಗಳ ಬಗ್ಗೆ ಚುನಾವಣೋತ್ತರ ಸಮೀಕ್ಷೆ ಫಲಿತಾಂಶ ಶನಿವಾರ ಪ್ರಕಟವಾಗಿದೆ. ಬಿಜೆಪಿ ನೇತೃತ್ವದ ಎನ್‍ಡಿಎಗೆ ಸ್ಪಷ್ಟ ಬಹುಮತ ಬರಲಿದ್ದು, 350 ಸೀಟು ದಾಟಿ 401 ಸೀಟುಗಳವರೆಗೆ ಎನ್‍ಡಿಎ ಪಡೆಯಬಹುದೆಂದು ತಿಳಿಸಲಾಗಿದೆ. ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜೀ ಅವರನ್ನು ಮತ್ತೊಮ್ಮೆ ಪ್ರಧಾನಮಂತ್ರಿಯನ್ನಾಗಿ ಮಾಡಲು ಜನರು ಮುಂದಾಗಿದ್ದಾರೆ. ಎಲ್ಲಾ ರಾಜ್ಯಗಳಲ್ಲಿ ಬಿಜೆಪಿ- ಎನ್‍ಡಿಎ ಗೆಲ್ಲುವ ಮುನ್ಸೂಚನೆ ಲಭಿಸಿದೆ. ಇದು ದೇಶದ 140 ಕೋಟಿ ಜನರಿಗೆ ಹೆಮ್ಮೆಯ ವಿಷಯ. ಎಕ್ಸಿಟ್ ಪೋಲ್ ನಂಬುವುದಿಲ್ಲ ಎಂಬ ಅನುಕೂಲ ಸಿಂಧು ನೀತಿಯನ್ನು ಕಾಂಗ್ರೆಸ್ ಹೊಂದಿದೆ. ಹಿಂದೆ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಅವರು ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ, ಬಿಜೆಪಿ ಸೋಲಲಿದೆ ಎಂದು ಎಕ್ಸಿಟ್ ಪೋಲ್ ಉಲ್ಲೇಖಿಸಿ ಹೇಳಿದ್ದರು ಎಂದು ಅವರು ಟೀಕಿಸಿದ್ದಾರೆ.

ಲೋಕಸಭಾ ಚುನಾವಣೆಯ ಹೆಮ್ಮೆಯ ಫಲಿತಾಂಶಕ್ಕೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ನಡ್ಡಾ, ಬಿಜೆಪಿಯ ಕೋಟ್ಯಂತರ ಕಾರ್ಯಕರ್ತರೇ ಕಾರಣ ಎಂದರು. ಇದನ್ನೂ ಓದಿ: ನಾನು ಹಿಂಗೆಲ್ಲ ಬದುಕಿಲ್ಲ, ಮಲಗಲು ಒಳ್ಳೆ ರೂಮ್ ಕೊಡಿ: ಅಧಿಕಾರಿಗಳೊಂದಿಗೆ ಪ್ರಜ್ವಲ್ ಕಿರಿಕ್!