ಬೆಳ್ಳಂಬೆಳಗ್ಗೆ ಲಾಲ್ ಬಾಗ್‍ನಲ್ಲಿ ಸೋಮಣ್ಣ ರೌಂಡ್ಸ್

ಬೆಂಗಳೂರು: ಬೆಳ್ಳಂಬೆಳಗ್ಗೆ ಲಾಲ್ ಬಾಗ್ ಉದ್ಯಾನವನಕ್ಕೆ ವಸತಿ ತೋಟಗಾರಿಕಾ ಮತ್ತು ರೇಷ್ಮೆ ಸಚಿವರಾದ ವಿ. ಸೋಮಣ್ಣ ಭೇಟಿ ಕೊಟ್ಟಿದ್ದಾರೆ. ಮುಂಜಾನೆ ಲಾಲ್ ಬಾಗ್‍ನಲ್ಲಿ ವಾಯು ವಿಹಾರ ಮಾಡಿ, ಲಾಲ್ ಬಾಗ್‍ಗೆ ವಾಯು ವಿಹಾರಕ್ಕೆ ಬಂದಿದ್ದ ನಾಗರಿಕರ ಜೊತೆ ಸಂವಾದ ನಡೆಸಿದ್ದಾರೆ.

ಲಾಲ್ ಬಾಗ್ ರೌಂಡ್ಸ್ ಹಾಕಿ ಗ್ಲಾಸ್ ಹೌಸ್, ರೋಜ್ ಗಾರ್ಡನ್, ಲಾಲ್ ಬಾಗ್ ಕೆರೆ ಮತ್ತು ಫಾಲ್ಸ್ ಅನ್ನು ಸಚಿವರು ವೀಕ್ಷಣೆ ಮಾಡಿದರು. ನಾಗರಿಕರ ಜೊತೆ ಮಾತನಾಡಿ ನಿಮಗೆ ಏನಾದರೂ ಸಮಸ್ಯೆ ಇದ್ದರೆ ಹೇಳಿ, ಉದ್ಯಾನವನದಲ್ಲಿ ಏನೇ ಕೆಲಸ ಆಗಬೇಕಾದರು ತಿಳಿಸಿ ಎಂದರು.

ಲಾಲ್ ಬಾಗ್ ರೌಂಡ್ಸ್ ಹಾಕಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಗಣರಾಜ್ಯೋತ್ಸವದ ಬಳಿಕ ನಾವು ಇಲ್ಲಿಗೆ ಭೇಟಿ ನೀಡಿದ್ದೇವೆ. ಮೊನ್ನೆಯಷ್ಟೇ ಕಬ್ಬನ್ ಪಾರ್ಕ್‍ಗೆ ಹೋಗಿದ್ದೆ. ವಾಕರ್ಸ್ ಆರೋಗ್ಯ ತಪಾಸಣೆಗೆ ಆಸ್ಪತ್ರೆಯನ್ನು ಮಾಡಲಾಗಿದೆ. ಸಾರ್ವಜನಿಕರು ನೆಮ್ಮದಿಯಿಂದ ವಾಕ್ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಮುಂದಿನ ತಿಂಗಳು ಆಯವ್ಯಯ ಮಂಡನೆ ಮಾಡಲಾಗುತ್ತದೆ. ಇದರಲ್ಲಿ ತೋಟಗಾರಿಕೆ ಇಲಾಖೆ ಅಭಿವೃದ್ಧಿಗೆ ಹಣ ಇಡುವಂತೆ ಮನವಿ ಮಾಡಲಾಗಿದೆ. ಫೆ. 3ರಂದು ಸಿಎಂ ಚರ್ಚೆಗೆ ಕರೆದಿದ್ದಾರೆ. ಇದನ್ನು ಇನ್ನೂ ಮೇಲ್ದರ್ಜೆಗೆ ಕೊಂಡೊಯ್ಯಲು ಚಿಂತನೆ ಮಾಡಲಾಗಿದೆ. ಕೆಂಪೇಗೌಡರ ಚಿಂತನೆಗೆ ಮೀರಿ ಬೆಂಗಳೂರು ಬೆಳೆಯುತ್ತಿದೆ ಎಂದು ತಿಳಿಸಿದರು.

ಸಂಪುಟ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಸೋಮಣ್ಣ, ಹೈಕಮಾಂಡ್ ಇದೆ, ಅನುಭವಿ ಸಿಎಂ ಇದ್ದಾರೆ. ತಿಂಗಳ ಕೊನೆಯಲ್ಲಿ ಸಂಪುಟ ವಿಸ್ತರಣೆ ಮಾಡ್ತಿನಿ ಅಂತ ಹೇಳಿದ್ದಾರೆ. ಅವರು ಸ್ಪಷ್ಟವಾಗಿ ಹೇಳಿದ್ದಾರೆ ತಿಂಗಳ ಕೊನೆಯಲ್ಲಿ ಸಂಪುಟ ವಿಸ್ತರಣೆ ಅಂತ. ಯಡಿಯೂರಪ್ಪ ನಿಂತ ನೀರಲ್ಲ, ಅವರು ಹೈಕಮಾಂಡ್ ಬಳಿ ಏನು ಮಾತನಾಡಿದ್ದಾರೆ ಎಂದು ಗೊತ್ತಿಲ್ಲ. ಹೈಕಮಾಂಡ್ ಕೂಡ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದೆ. ನಾನು ಊಹಾಪೋಹದವನಲ್ಲ ಹಿರಿಯ ಸಚಿವರಿಗೆ ಕೋಕ್ ನೀಡುವ ಬಗ್ಗೆ ಖಂಡಿತವಾಗಿಯೂ ಗೊತ್ತಿಲ್ಲ ಎಂದು ಹೇಳಿದರು.

Comments

Leave a Reply

Your email address will not be published. Required fields are marked *