ಜಯಲಲಿತಾ ಸಮಾಧಿಗೆ ತೆರಳಿದ ಚಿನ್ನಮ್ಮ- ಮತ್ತೆ ಸಕ್ರಿಯ ರಾಜಕಾರಣಕ್ಕೆ ಎಂಟ್ರಿ?

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಸಮಾಧಿ ಸ್ಥಳಕ್ಕೆ ಅವರ ಆಪ್ತೆ ವಿ.ಕೆ ಶಶಿಕಲಾ ಇಂದು ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದ್ದಾರೆ. ಈ ನಡೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದು, ಇದೀಗ ಮತ್ತೆ ಅವರು ಸಕ್ರಿಯ ರಾಜಕಾರಣಕ್ಕೆ ಬರಲು ಸಿದ್ಧರಾಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ತಮಿಳುನಾಡಿನ ಅಮ್ಮ ಎಂದೇ ಖ್ಯಾತರಾಗಿದ್ದ ಜಯಲಲಿತಾ ಅವರ ನಿಧನದ ಬಳಿಕ ಶಶಿಕಲಾ ಅಕ್ರಮ ಆಸ್ತಿ ಸಂಬಂಧಿಸಿದ ಕೇಸ್‍ನಲ್ಲಿ 4 ವರ್ಷ ಜೈಲು ವಾಸ ಅನುಭವಿಸಿ ಹೊರ ಬಂದಿದ್ದರು. ಬಳಿಕ ರಾಜಕೀಯದಿಂದ ದೂರ ಉಳಿದಿದ್ದ ಚಿನ್ನಮ್ಮ ಇದೀಗ ಮತ್ತೆ ರಾಜಕೀಯದತ್ತ ಮುಖ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಜಯಲಲಿತಾ ಅವರ ಸಮಾಧಿ ಸ್ಥಳಕ್ಕೆ ತೆರಳಿದ ಚಿನ್ನಮ್ಮ ಪೂಜೆ ಸಲ್ಲಿಸಿ ತಮ್ಮ ರಾಜಕೀಯ ಮರು ಪ್ರವೇಶದ ಬಗ್ಗೆ ಒಂದು ಸ್ಪಷ್ಟ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಮಾತು ಆಪ್ತ ವಲಯದಿಂದ ಕೇಳಿ ಬಂದಿದೆ. ಇದನ್ನೂ ಓದಿ: ನಾಲ್ಕು ವರ್ಷ ಜೈಲು ಶಿಕ್ಷೆ ಪೂರ್ಣ – ಜೈಲಿನಿಂದ ಶಶಿಕಲಾ ಬಿಡುಗಡೆ

ತಮಿಳುನಾಡು ರಾಜಕೀಯ ಇತಿಹಾಸದಲ್ಲಿ ಅಣ್ಣಾ ಡಿಎಂಕೆ ಪಕ್ಷ ಸ್ಥಾಪನೆಗೊಂಡು ಅಕ್ಟೋಬರ್ 17ಕ್ಕೆ 50 ವರ್ಷ ತುಂಬಲಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ನಾಯಕರು, ಕಾರ್ಯಕರ್ತರು ರಾಜ್ಯಾದ್ಯಂತ ಸಂಸ್ಥಾಪನಾ ದಿನ ಆಚರಣೆ ಮಾಡಲು ತಯಾರಿ ನಡೆಸಿದ್ದು, ಇದೇ ದಿನ ಚಿನ್ನಮ್ಮ ಶುಭ ಸುದ್ದಿ ನೀಡಲಿದ್ದಾರೆ ಎಂದು ವರದಿಯಾಗಿದೆ. ಅದಲ್ಲದೆ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅಣ್ಣಾ ಡಿಎಂಕೆ ಪಕ್ಷ ಕಂಡ ಸೋಲಿನ ಬಳಿಕ ಮತ್ತೆ ಪಕ್ಷವನ್ನು ಬಲಗೊಳಿಸಲು ಚಿನ್ನಮ್ಮ ಮುಂದಾಗಿದ್ದಾರೆ. ಈ ನಡುವೆ ಇಂದು ಚಿನ್ನಮ್ಮ ತಮ್ಮ ಬೆಂಬಲಿಗರೊಂದಿಗೆ ಸೇರಿ ಮರೀನಾ ಬೀಚ್ ನಲ್ಲಿರುವ ಜಯಲಲಿತಾ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದರು. ಈ ವೇಳೆ ಜಯಲಲಿತಾರನ್ನು ನೆನೆದು ಶಶಿಕಲಾ ಭಾವುಕರಾದರು. ಇದನ್ನೂ ಓದಿ: ತವರಿನತ್ತ ಹೊರಟ ಮನ್ನಾರ್ ಗುಡಿ ಚಿನ್ನಮ್ಮ ಶಶಿಕಲಾ ನಟರಾಜನ್

Comments

Leave a Reply

Your email address will not be published. Required fields are marked *