ಪತ್ನಿಯ ಕತ್ತರಿಸಿದ ತಲೆಯೊಂದಿಗೆ ಠಾಣೆಗೆ ಬಂದು ರಾಷ್ಟ್ರಗೀತೆ ಹಾಡಿದ!

– ಭಾರತ್ ಮಾತಾ ಕೀ ಜೈ ಎಂದ
– ಗ್ರಾಮದ ಜನ್ರಲ್ಲಿ ಭಯ ಹುಟ್ಟಿಸಿದ ಘಟನೆ

ಲಕ್ನೋ: ಪಾಪಿ ಪತಿಯೊಬ್ಬ ತನ್ನ ಪತ್ನಿಯ ತಲೆಯನ್ನು ಕತ್ತರಿಸಿದ್ದಲ್ಲದೇ ಅದನ್ನು ತನ್ನ ಕೈಯಾರೆ ಹಿಡಿದುಕೊಂಡು ಪೊಲೀಸ್ ಠಾಣೆಗೆ ತೆರಳಿದ ಅಮಾನವೀಯ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ.

ಈ ಘಟನೆ ಜಹಂಗೀರ್ ಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಬಹದೂರ್ ಪರ್ ಗ್ರಾಮದಲ್ಲಿ ಶನಿವಾರ ನಡೆದಿದೆ. ಆರೋಪಿಯನ್ನು ಅಖಿಲೇಶ್ ರಾವತ್ ಎಂದು ಗುರುತಿಸಲಾಗಿದ್ದು, ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಪತಿ-ಪತ್ನಿ ಮಧ್ಯೆ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿದೆ. ಈ ಜಗಳ ತಾರಕಕ್ಕೇರಿ ಸಿಟ್ಟುಗೊಂಡ ಪತಿರಾಯ ತನ್ನ ಪತ್ನಿಯ ತಲೆ ಕಡಿದು, ತಲೆ ಹಿಡಿದುಕೊಂಡು ನೇರವಾಗಿ ಪೊಲಿಸ್ ಠಾಣೆಗೆ ತೆರಳಿದ್ದಾನೆ.

ಅಚ್ಚರಿ ಅಂದರೆ ಆರೋಪಿ ಪತ್ನಿ ತಲೆಯನ್ನು ಪೊಲೀಸ್ ಠಾಣೆಗೆ ತೆರಳುತ್ತಿದ್ದಂತೆಯೇ ಪೊಲೀಸರು ಆತನ ಕೈಯಿಂದ ಕತ್ತರಿಸಿದ ತಲೆ ತೆಗೆದುಕೊಳ್ಳಲು ಪ್ರಯತ್ನಿಸಿದ್ದಾರೆ. ಈ ವೇಳೆ ಆತ ಕೂಡಲೇ ರಾಷ್ಟ್ರಗೀತೆ ಹಾಡಲು ಶುರು ಮಾಡಿದ್ದಾನೆ. ಅಲ್ಲದೆ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದ್ದಾನೆ. ಬಳಿಕ ಆರೋಪಿ ಮತ್ತು ಪೊಲೀಸರ ಮಧ್ಯೆ ಕೆಲ ಕಾಲ ವಾಕ್ಸಮರವೂ ನಡೆಯಿತು. ನಂತರ ಪೊಲೀಸರು ಆತನ ಕೈಯಿಂದ ಕತ್ತರಿಸಿದ ತಲೆಯನ್ನು ವಶಕ್ಕೆ ಪಡೆದುಕೊಂಡರು. ಈ ಘಟನೆ ಗ್ರಾಮದ ಜನರಲ್ಲಿ ಭಯಹುಟ್ಟಿಸಿದೆ.

ಆರೋಪಿ ಅಖಿಲೇಶ್ ರಾವತ್, ಮೊದಲು ತನ್ನ ಪತ್ನಿಯನ್ನು ಕೊಲೆ ಮಾಡಿದ್ದಾನೆ. ನಂತರ ಮೃತದೇಹದ ತಲೆಯನ್ನು ಕತ್ತರಿಸಿದ್ದು, ಆ ತಲೆಯೊಂದಿಗೆ ಪೊಲೀಸ್ ಠಾಣೆಗೆ ಬಂದಾಗ ಆತನನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಇದೊಂದು ಕೌಟುಂಬಿಕ ಕಲಹದಿಂದಾದ ಘಟನೆಯಾಗಿದೆ ಎಂದು ಎಸ್‍ಪಿ ಅರವಿಂದ್ ಚತುರ್ವೇದಿ ತಿಳಿಸಿದ್ದಾರೆ. ಘಟನೆ ಸಂಬಂಧ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿದಿದೆ.

Comments

Leave a Reply

Your email address will not be published. Required fields are marked *