ಕಾಡಾನೆ, ಕರಡಿ ದಾಳಿ- ಕಂಗೆಟ್ಟ ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ರೈತರು

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಬನವಾಸಿ ಭಾಗದಲ್ಲಿ ಆನೆಗಳ ದಾಳಿಯಿಂದ ರೈತರು ಕಂಗೆಟ್ಟರೆ, ಇತ್ತ ಜೋಯಿಡಾ ದಾಂಡೇಲಿ ಭಾಗದಲ್ಲಿ ಕರಡಿ ದಾಳಿಯಿಂದ ಜನ ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಕಳೆದೆರಡು ದಿನಗಳಿಂದ ಶಿರಸಿಯ ಪೂರ್ವ ಭಾಗದ ಮದ್ರಳ್ಳಿ ಭಾಗದಲ್ಲಿ ಬೀಡು ಬಿಟ್ಟಿರುವ ಆನೆಗಳು ರೈತರ ಗದ್ದೆಗಳಿಗೆ ನುಗ್ಗಿ ತೊಂದರೆ ಕೊಡುತ್ತಿವೆ. ಬೆಳೆದ ಫಸಲನ್ನು ಆನೆಗಳು ನಾಶ ಮಾಡತೊಡಗಿದೆ. ಇದರಿಂದಾಗಿ ಸ್ಥಳೀಯರು ಆತಂಕದಿಂದ ಕಾಲ ಕಳೆಯಬೇಕಾಗಿದೆ. ಇಷ್ಟು ದಿನ ಮುಂಡಗೋಡ ಕಡೆ ಇರುತ್ತಿದ್ದ ಗಜಪಡೆ ಮದ್ರಳ್ಳಿಯಲ್ಲಿ ಠಿಕಾಣಿ ಹೂಡಿದ್ದು ತನ್ನ ಪ್ರತಾಪ ತೋರಿಸುತ್ತಿವೆ.

ಗುಂಪಿನಲ್ಲಿ ನಾಲ್ಕು ಆನೆಗಳಿದ್ದು, ಕೇವಲ ಕೃಷಿ ಭೂಮಿಗೆ ದಾಳಿ ಇಡುವುದಲ್ಲದೇ ಗ್ರಾಮಗಳಿಗೂ ಲಗ್ಗೆ ಇಡುತ್ತಿದ್ದು, ಗ್ರಾಮಸ್ಥರು ಕಂಗಾಲಾಗಿದ್ದಾರೆ. ಇದೇ ಮೊದಲ ಬಾರಿಗೆ ಶಿವಮೊಗ್ಗ ಜಿಲ್ಲೆಯ ಸೊರಬ ಹಾಗೂ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ಭಾಗದಿಂದ ಆನೆಗಳು ಬನವಾಸಿ ಪ್ರದೇಶಕ್ಕೆ ಬಂದು ಬೀಡು ಬಿಟ್ಟಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದು, ಆನೆಗಳನ್ನ ಓಡಿಸುವ ಪ್ರಯತ್ನ ನಡೆಸಿದ್ದಾರೆ.

ಜೋಯಿಡಾ ಭಾಗದಲ್ಲಿ ಕರಡಿ ದಾಳಿ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕರಡಿಯೊಂದು ದಾಳಿ ನಡೆಸಿ ಕಾಲನ್ನು ಕಚ್ಚಿ ಹರಿದ ಘಟನೆ ಜೋಯಿಡಾ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಕುಂಬಾರವಾಡಾ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ನಡೆದಿದೆ.

ಜೋಯಿಡಾದ ನುಜ್ಜಿ ಸಮೀಪದ ಗ್ರಾಮದ ವಿಠಲ್ ಭಾಮಟೋ ವೇಳಿಪ ಕರಡಿ ದಾಳಿಗೆ ತುತ್ತಾಗಿದ್ದಾರೆ. ವಿಠಲ್ ತಮ್ಮ ಹೊಲದ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಕರಡಿ ದಾಳಿ ನಡೆಸಿದೆ. ಮೊಳಕಾಲಿನ ಕೆಳಭಾಗವನ್ನು ಕರಡಿ ಕಚ್ಚಿ ಹರಿದಿದ್ದು, ಗಾಯಾಳು ಜೀವಾಪಾಯದಿಂದ ಪಾರಾಗಿದ್ದಾರೆ. ರೈತನಿಗೆ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು, ಮುಂದಿನ ಚಿಕಿತ್ಸೆಗಾಗಿ ಅರಣ್ಯ ಇಲಾಖೆ ಸಹಕಾರ ನೀಡಬೇಕೆಂದು ಈ ಬಡ ರೈತನ ಕುಂಟುಂಬ ಆಗ್ರಹಿಸಿದೆ.

ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗದಲ್ಲಿ ವನ್ಯಜೀವಿಗಳ ಕಾಟ ಈ ಬಾರಿ ಮಿತಿ ಮೀರಿದ್ದು ಇದೇ ತಿಂಗಳಲ್ಲಿ ಆನೆ ,ಕರಡಿ ದಾಳಿಗೆ ನಾಲ್ಕು ಜನ ಗಂಭೀರ ಗಾಯಗೊಂಡಿದ್ದಾರೆ.

Comments

Leave a Reply

Your email address will not be published. Required fields are marked *