ಹಣ ಕೊಡದಕ್ಕೆ ಟಿಕ್‍ಟಾಕ್ ಸ್ನೇಹಿತೆಯನ್ನು ಕೊಂದ ಯುವಕ

– 25 ವರ್ಷದ ಯುವಕನಿಂದ 50 ವರ್ಷದ ಗೃಹಿಣಿ ಕೊಲೆ

ಲಕ್ನೋ: ಕೇಳಿದಾಗ ಹಣ ಕೊಡಲಿಲ್ಲ ಎಂದು ಯುವಕನೋರ್ವ ತನ್ನ ಟಿಕ್‍ಟಾಕ್‍ನಲ್ಲಿ ಸ್ನೇಹಿತೆಯಾಗಿದ್ದ ಗೃಹಿಣಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.

29 ವರ್ಷದ ರಾಘವ್ ಕುಮಾರ್ ತನ್ನ ಟಿಕ್‍ಟಾಕ್ ಸ್ನೇಹಿತೆ 50 ವರ್ಷದ ನೀರ್ಜಾ ಚೌಹಾನ್ ಅವರನ್ನು ಆಕೆಯ ನಿವಾಸದಲ್ಲೇ ಕೊಲೆ ಮಾಡಿದ್ದಾನೆ. ಗೃಹಿಣಿಯಾಗಿರುವ ನೀರ್ಜಾ ಅವರು ಟಿಕ್‍ಟಾಕ್ ಮತ್ತು ಲೈಕಿ ಎಂಬ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯವಾಗಿ ಇದ್ದರು. ಜೊತೆಗೆ ಹಲವಾರು ಜನ ಫಾಲೋವರ್ಸ್ ಗಳನ್ನು ಕೂಡ ಹೊಂದಿದ್ದರು.

ರಾಘವ್ ಕೂಡ ಟಿಕ್‍ಟಾಕ್‍ನಲ್ಲಿ ನೀರ್ಜಾ ಅವರನ್ನು ಫಾಲೋ ಮಾಡಿ ಪರಿಚಯ ಮಾಡಿಕೊಂಡು, ಗೃಹಿಣಿಯ ಜೊತೆ ಸ್ನೇಹ ಬೆಳಸಿಕೊಂಡಿದ್ದ. ನೀರ್ಜಾ ಅವರ ಪತಿ ಬೇರೆ ರಾಜ್ಯದಲ್ಲಿ ಉದ್ಯೋಗಿ ಆಗಿದ್ದು, ನೀರ್ಜಾ ತನ್ನ ಮಗನ ಜೊತೆ ವಾಸವಿದ್ದರು. ಹೀಗೆ ಸ್ನೇಹಿತನಾಗಿದ್ದ ರಾಘವ್ ಒಂದು ದಿನ ನೀರ್ಜಾ ಅವರ ಮನೆಗೆ ಬಂದು ಹಣ ಕೇಳಿದ್ದಾನೆ. ಆದರೆ ಅವರು ಹಣ ಕೊಟ್ಟಿಲ್ಲ. ಈ ಕಾರಣಕ್ಕೆ ಅವರನ್ನು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ.

ರಾಘವ್ ಬೆಳಗ್ಗೆ 11.30 ಸುಮಾರಿಗೆ ಆಕೆಯನ್ನು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ನಂತರ ನೀರ್ಜಾ ಅವರ ಮಗ ತಾಯಿ ಊಟ ಮಾಡಿದ್ದರಾ ಎಂದು ವಿಚಾರಿಸಲು ಫೋನ್ ಮಾಡಿದ್ದಾರೆ. ಆದರೆ ತಾಯಿ ಫೋನ್ ಕರೆ ಸ್ವೀಕರಿಸಿಲ್ಲ. ಇದರಿಂದ ಅನುಮಾನಗೊಂಡ ಮಗ ಸಂಜೆ 5 ಗಂಟೆಗೆ ಮನೆಗೆ ಬಂದು ಬಾಗಿಲನ್ನು ಬಡಿದಾಗ ಡೋರ್ ಓಪನ್ ಮಾಡಿಲ್ಲ. ಬಾಗಿಲು ಮುರಿದು ಒಳಗೆ ಹೊಗಿ ನೋಡಿದಾಗ ತಾಯಿ ಸಾವನ್ನಪ್ಪಿರುವ ಗೊತ್ತಾಗಿದೆ.

ನೀರ್ಜಾ ಅವರ ಪುತ್ರ ತಕ್ಷಣ ಇದನ್ನು ಪೊಲೀಸರಿಗೆ ತಿಳಿಸಿದ್ದು, ಸ್ಥಳಕ್ಕೆ ಬಂದ ಪೊಲೀಸರು, ಹತ್ತಿರದಲ್ಲಿ ಇದ್ದ ಸಿಸಿಟಿವಿಯನ್ನು ಚೆಕ್ ಮಾಡಿದಾಗ ರಾಘವ್ ಮನೆಗೆ ಬಂದು ಹೋಗಿರುವುದು ತಿಳಿದುಬಂದಿದೆ. ಆಗ ಆತನನ್ನು ಅರೆಸ್ಟ್ ಮಾಡಿ ವಿಚಾರಣೆ ಮಾಡಿದಾಗ, ಆತನೇ ಕೊಲೆ ಮಾಡಿರುವುದು ದೃಢಪಟ್ಟಿದೆ. ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಆರೋಪಿ ರಾಘವ್ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.

Comments

Leave a Reply

Your email address will not be published. Required fields are marked *