ಅತ್ಯಾಚಾರ ಪ್ರಕರಣದಲ್ಲಿ ಚಿನ್ಮಯಾನಂದ ಅರೆಸ್ಟ್ – 14 ದಿನ ನ್ಯಾಯಾಂಗ ಬಂಧನ

ಲಕ್ನೋ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಚಿನ್ಮಯಾನಂದ ಅವರನ್ನು ಬಂಧಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಕಾನೂನು ವಿದ್ಯಾರ್ಥಿ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದ ಚಿನ್ಮಯಾನಂದ ಅವರನ್ನು ಉತ್ತರ ಪ್ರದೇಶದ ವಿಶೇಷ ತನಿಖಾ ತಂಡ (ಎಸ್‍ಐಟಿ) ಇಂದು ಬೆಳಗ್ಗೆ 9 ಗಂಟೆಯ ವೇಳೆಗೆ ಅವರ ನಿವಾಸ ದಿವ್ಯಾ ಧಾಮ್‍ನಲ್ಲಿ ಬಂಧಿಸಿದ್ದಾರೆ.

ಬೆಳಗ್ಗೆ ಚಿನ್ಮಯಾನಂದ ಅವರನ್ನು ಅರೆಸ್ಟ್ ಮಾಡಿದ ಎಸ್‍ಐಟಿ ಅಧಿಕಾರಿಗಳು ಅವರನ್ನು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಿದರು. ನಂತರ ಅವರನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದು, ಜಡ್ಜ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ಈ ವಿಚಾರದಲ್ಲಿ ಚಿನ್ಮಯಾನಂದವರನ್ನು ಅರೆಸ್ಟ್ ಮಾಡದೇ ಹೋದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ವಿದ್ಯಾರ್ಥಿ ಬುಧವಾರ ಬೆದರಿಕೆ ಸಹ ಹಾಕಿದ್ದಳು. ಇದನ್ನು ಓದಿ: ಸ್ವಾಮಿ ಚಿನ್ಮಯಾನಂದ ಪ್ರಕರಣ -ಯೋಗಿ ಸರ್ಕಾರದ ವಿರುದ್ಧ ಗುಡುಗಿದ ಪ್ರಿಯಾಂಕ ಗಾಂಧಿ

ಈ ವಿಚಾರವಾಗಿ ಮಾತನಾಡಿರುವ ಉತ್ತರ ಪ್ರದೇಶದ ಡಿಜಿಪಿ ಒಪಿ ಸಿಂಗ್ ಅವರು, ಚಿನ್ಮಯಾನಂದ ಪ್ರಕರಣದಲ್ಲಿ ಯಾವುದೇ ವಿಳಂಬ ಮಾಡುವುದಿಲ್ಲ. ಈ ಪ್ರಕರಣದಲ್ಲಿ ಚಿನ್ಮಯಾನಂದ ಅವರ ಪರವಾಗಿ ಬೆದರಿಕೆ ಹಾಕಿದ ಇನ್ನೂ ಮೂವರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ಏನಿದು ಪ್ರಕರಣ?
ಮಾಜಿ ಕೇಂದ್ರ ಸಚಿವರೊಬ್ಬರು ಕಿರುಕುಳ ನೀಡುತ್ತಿದ್ದಾರೆ ಮತ್ತು ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ ವಿದ್ಯಾರ್ಥಿನಿ ಒಂದು ದಿನದ ನಂತರ, ಆಗಸ್ಟ್ 24 ರಿಂದ ಚಿನ್ಮಯಾನಂದ ಅವರ ಟ್ರಸ್ಟ್ ನಡೆಸುತ್ತಿರುವ ಕಾಲೇಜಿನಿಂದ ಕಾಣೆಯಾಗಿದ್ದಳು. ಆದರೆ ವಿಡಿಯೋದಲ್ಲಿ ಎಲ್ಲೂ ಸ್ವಾಮಿ ಚಿನ್ಮಯಾನಂದ್ ಅವರ ಹೆಸರನ್ನು ಹೇಳದ ವಿದ್ಯಾರ್ಥಿ ಕೇವಲ ಸಂತ ಸಮುದಾಯದ ಹಿರಿಯ ನಾಯಕ ಎಂದು ಮಾತ್ರ ಹೇಳಿದ್ದಳು. ಇದನ್ನು ಓದಿ: ಚಿನ್ಮಯಾನಂದ ಕೇಸ್: ಕಾಣೆಯಾಗಿದ್ದ ವಿದ್ಯಾರ್ಥಿನಿ ರಾಜಸ್ಥಾನದಲ್ಲಿ ಪತ್ತೆ

ಆದರೆ ವಿದ್ಯಾರ್ಥಿ ಮಾಡಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. ನಂತರ ಆಕೆಯ ವಿಡಿಯೋ ಆಧರಿಸಿ, ಆಕೆಯ ತಂದೆ ಅವಳು ಅಧ್ಯಯನ ಮಾಡುತ್ತಿದ್ದ ಕಾಲೇಜಿನ ಮುಖ್ಯಸ್ಥರಾಗಿರುವ ಮಾಜಿ ಕೇಂದ್ರ ಸಚಿವರಾದ ಚಿನ್ಮಯಾನಂದ್ ಅವರ ವಿರುದ್ಧ ಆಗಸ್ಟ್ 27 ರಂದು ದೂರು ನೀಡಿದ್ದರು. ಇದಾದ ನಂತರ ಆಗಸ್ಟ್ 30 ರಂದು ವಿದ್ಯಾರ್ಥಿನಿ ರಾಜಸ್ಥಾನದಲ್ಲಿ ಪತ್ತೆಯಾಗಿದ್ದಳು.

Comments

Leave a Reply

Your email address will not be published. Required fields are marked *