ಸೋನಾಕ್ಷಿಯಿಂದ ವಂಚನೆ – ನಟಿಯ ಮನೆಗೆ ಭೇಟಿಕೊಟ್ಟ ಯುಪಿ ಪೊಲೀಸರು

ಲಕ್ನೋ: ವಂಚನೆ ಆರೋಪ ಎದುರಿಸುತ್ತಿರುವ ಬಾಲಿವುಡ್‍ನ ಖ್ಯಾತ ನಟಿ ಸೋನಾಕ್ಷಿ ಸಿನ್ಹಾ ಮನೆಗೆ ಉತ್ತರ ಪ್ರದೇಶ ಪೊಲೀಸರ ತಂಡ ಭೇಟಿ ನೀಡಿದೆ.

ಹಣ ಕೊಟ್ಟಿದ್ದರೂ ನಟಿ ಸೋನಾಕ್ಷಿ ಸಿನ್ಹಾ ದೆಹಲಿಯಲ್ಲಿ ಕಾರ್ಯಕ್ರಮ ನೀಡದೆ ವಂಚಿಸಿದ್ದಾರೆ ಎಂದು ಆಯೋಜಕರು ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಗುರುವಾರ ಹಾಗೂ ಶುಕ್ರವಾರ ಉತ್ತರ ಪ್ರದೇಶ ಪೊಲೀಸರು ಸೋನಾಕ್ಷಿ ಸಿನ್ಹಾ ಅವರ ಮನೆ ಬಾಗಿಲನ್ನು ತಟ್ಟಿದ್ದಾರೆ.

ಏನಿದು ಪ್ರಕರಣ?:
ದೆಹಲಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಸೋನಾಕ್ಷಿ ಸಿನ್ಹಾ 24 ಲಕ್ಷ ರೂ. ಹಣವನ್ನು ಮುಂಗಡವಾಗಿ ಪಡೆದಿದ್ದರು. ಆದರೆ ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ. ಇದರಿಂದ ಕೋಪಗೊಂಡು ಕಾರ್ಯಕ್ರಮ ಆಯೋಜಿಸಿದ್ದ ವ್ಯಕ್ತಿ ಸೋನಾಕ್ಷಿ ವಿರುದ್ಧ ದೂರು ನೀಡಿದ್ದರು. ಈ ಕುರಿತು ಉತ್ತರ ಪ್ರದೇಶದ ಮೊರಾದಾಬಾದ್ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ನಟಿ ಆರೋಪಿ ಆಗಿರುವ ಕಾರಣ ಹೇಳಿಕೆ ಪಡೆಯಲು ಉತ್ತರ ಪ್ರದೇಶದ ಪೊಲೀಸರು ಮುಂಬೈನ ಜುಹು ಪೊಲೀಸ್ ಠಾಣೆಯ ಅಧಿಕಾರಿಗಳ ನೆರವಿನೊಂದಿಗೆ ಗುರುವಾರ ಸೋನಾಕ್ಷಿ ಮನೆಗೆ ಭೇಟಿ ನೀಡಿದ್ದರು. ಆದರೆ ಪೊಲೀಸರು ಮನೆಗೆ ಬಂದಾಗ ಸೋನಾಕ್ಷಿ ಸಿನ್ಹಾ ಇರಲಿಲ್ಲ. ಹೀಗಾಗಿ ಕೆಲ ನಿಮಿಷಗಳು ಕಾದು ಮರಳಿದ್ದ ಪೊಲೀಸರು ಶುಕ್ರವಾರ ಮತ್ತೆ ಆಗಮಿಸಿದ್ದರು.

ಈ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ನಟಿ ಸೋನಾಕ್ಷಿ ಸಿನ್ಹಾ, ಇಂತಹ ಆರೋಪಗಳ ಮೂಲಕ ಮಾಧ್ಯಮಗಳಲ್ಲಿ ನನ್ನ ಹೆಸರಿಗೆ ಮಸಿ ಬಳಿಯಬಹುದೆಂದು ಕಾರ್ಯಕ್ರಮದ ಆಯೋಜಕರು ಯೋಚಿಸಿದ್ದಾರೆ. ಈ ಸಂಬಂಧ ತನಿಖೆಗೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ. ಈ ಸುದ್ದಿಯನ್ನು ಮಾಧ್ಯಮಗಳು ಪ್ರಸಾರ ಮಾಡದಂತೆ ಬೇಡಿಕೊಳ್ಳುತ್ತೇನೆ ಎಂದು ಮನವಿ ಮಾಡಿದ್ದಾರೆ.

ಸೋನಾಕ್ಷಿ ಸಿನ್ಹಾರ ವಕ್ತಾರ ಆರೋಪವನ್ನು ತಳ್ಳಿ ಹಾಕಿದ್ದು, ಇದೆಲ್ಲವೂ ಸೋನಾಕ್ಷಿ ಸಿನ್ಹಾ ಅವರ ಹೆಸರಿಗೆ ಮಸಿ ಬಳಿಯಲು ಮಾಡಲಾಗಿದೆ ಎಂದು ಹೇಳಿದ್ದಾರೆ.

https://twitter.com/sonakshisinha/status/1149584715927584770

Comments

Leave a Reply

Your email address will not be published. Required fields are marked *