ನವದೆಹಲಿ: ಉತ್ತರ ಪ್ರದೇಶದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಏರುವ ಮೂಲಕ ಯೋಗಿ ಆದಿತ್ಯನಾಥ್ 4 ದಾಖಲೆಯನ್ನು ಬರೆದಿದ್ದಾರೆ. 1985ರ ನಂತರ ಯಾವುದೇ ಪಕ್ಷ ಸತತ ಎರಡು ಬಾರಿ ಉತ್ತರ ಪ್ರದೇಶವನ್ನು ಆಳಿಲ್ಲ. ಆದರೆ ಈ ಬಾರಿ ಯೋಗಿ ನೇತೃತ್ವದಲ್ಲಿ ಮೊದಲ ಸಲ ಬಿಜೆಪಿ ಸತತ ಎರಡು ಚುನಾವಣೆಯನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದೆ.
ಅಧಿಕಾರಾವಧಿ ಪೂರ್ಣಗೊಳಿಸಿದ ಮೂರನೇ ಮುಖ್ಯಮಂತ್ರಿ
ಯೋಗಿ ಆದಿತ್ಯನಾಥ್ ಈಗಾಗಲೇ ತಮ್ಮ ಹೆಸರಿಗೆ ದಾಖಲೆಯೊಂದನ್ನು ನೋಂದಾಯಿಸಿಕೊAಡಿದ್ದಾರೆ. ಮೇ 20, 1952 ರಂದು ಭಾರತದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯದ ಮೊದಲ ಅಸೆಂಬ್ಲಿಯನ್ನು ರಚಿಸಿದಾಗಿನಿಂದ ಇಲ್ಲಿಯವರೆಗೆ, ಯುಪಿ ಸುಮಾರು 70 ವರ್ಷಗಳಲ್ಲಿ 21 ಸಿಎಂಗಳನ್ನು ಕಂಡಿದೆ. ಆದರೆ ಕೇವಲ ಮೂವರು ಮಾತ್ರ ಐದು ವರ್ಷಗಳ ಸಂಪೂರ್ಣ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ್ದಾರೆ.

ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಅಧಿನಾಯಕಿ ಮಾಯಾವತಿ 2007-2012ರಲ್ಲಿ ಮೊದಲ ಬಾರಿಗೆ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ 2012-2017ರ ಅವಧಿಯಲ್ಲಿ ಅಧಿಕಾರ ಪೂರ್ಣಗೊಳಿಸಿದ್ದರು. ಇದಾದ ಬಳಿಕ ಯೋಗಿ ಆದಿತ್ಯನಾಥ್ ಪೂರ್ಣಾವಧಿಯನ್ನು ಪೂರ್ಣಗೊಳಿಸಿದ ಮೂರನೇ ಮುಖ್ಯ ಮಂತ್ರಿಯಾಗಿದ್ದಾರೆ. ಇದನ್ನೂ ಓದಿ: ಈ ಕ್ರಾಂತಿಗಾಗಿ ಪಂಜಾಬ್ ಜನತೆಗೆ ಧನ್ಯವಾದಗಳು: ಕೇಜ್ರಿವಾಲ್
15 ವರ್ಷದ ಬಳಿಕ ನೇರ ಆಯ್ಕೆಯಾಗಿ ಸಿಎಂ
ಈ ಬಾರಿ ಗೋರ್ಖ್ ಪುರ ಕ್ಷೇತ್ರದಿಂದ ಸ್ಪರ್ಧಿಸಿರುವ ಯೋಗಿ ಆದಿತ್ಯನಾಥ್ ಗೆದ್ದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರೆ 15 ವರ್ಷದ ಬಳಿಕ ವಿಧಾನಸಭೆಯಿಂದ ಆಯ್ಕೆಯಾದ ಶಾಸಕರೊಬ್ಬರು ಸಿಎಂ ಆದಂತಾಗಲಿದೆ. 2007-2012ರಲ್ಲಿ ಸಿಎಂ ಆಗಿದ್ದ ಮಾಯಾವತಿ, 2012-2017ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಅಖಿಲೇಶ್ ಯಾದವ್ ಎಂಎಲ್ಸಿಯಾಗಿ ಮುಖ್ಯಮಂತ್ರಿ ಗಾದಿಗೇರಿದ್ದರು.

ಕಳೆದ 2017ರ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ ಸಿಎಂ ಆಗಿ ಆಯ್ಕೆಯಾಗಿದ್ದರು. ಅದಕ್ಕೂ ಮುನ್ನ ಅವರು ಗೋರಖ್ ಪುರ ಕ್ಷೇತ್ರದ ಸಂಸದರಾಗಿದ್ದರು. ಸಿಎಂ ಆದ ಬಳಿಕ ಅವರು ಆರು ತಿಂಗಳಲ್ಲಿ ಶಾಸಕರಾಗಬೇಕಿತ್ತು. ಅದಕ್ಕಾಗಿ ಅವರೂ ವಿಧಾನಸಭೆ ಮೊರೆ ಹೋಗದೇ ಪರಿಷತ್ ಮೂಲಕ ಆಯ್ಕೆಯಾಗಿದ್ದರು.
37 ವರ್ಷಗಳಲ್ಲಿ ಅಧಿಕಾರ ಉಳಿಸಿಕೊಂಡ ಮೊದಲ ಸಿಎಂ
ಈವರೆಗೂ ಉತ್ತರ ಪ್ರದೇಶದಲ್ಲಿ ನಾಲ್ಕು ಮಂದಿ ಮುಖ್ಯಮಂತ್ರಿಗಳು ಎರಡನೇ ಅವಧಿಗೆ ಆ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಅವಿಭಜಿತ ಉತ್ತರ ಪ್ರದೇಶ ಸಮಯದಲ್ಲಿ 1985 ರಲ್ಲಿ ಕಾಂಗ್ರೆಸ್ನ ನಾರಯಣ ದತ್ತ ತಿವಾರಿ ಅಧಿಕಾರ ಉಳಿಸಿಕೊಂಡ ಕಡೆಯ ಸಿಎಂ. ಇದಕ್ಕೂ ಮೊದಲು 1957 ರಲ್ಲಿ ಸಂಪೂರ್ಣನAದ, 1962 ಚಂದ್ರಭಾನು ಗುಪ್ತಾ, 1974 ರಲ್ಲಿ ಹೇಮಾವತಿ ನಂದನ್ ಬಹುಗುಣ ಅಧಿಕಾರ ಎರಡನೇ ಬಾರಿಗೆ ಉಳಿಸಿಕೊಂಡಿದ್ದರು. ಈಗ ಯೋಗಿ ಆದಿತ್ಯನಾಥ್ ಅದನ್ನು ಉಳಿಸಿಕೊಳ್ಳುವ ಮೂಲಕ 37 ವರ್ಷಗಳಲ್ಲಿ ಅಧಿಕಾರ ಉಳಿಸಿಕೊಂಡ ಮೊದಲ ಮುಖ್ಯಮಂತ್ರಿ ಆಗಿದ್ದಾರೆ. ಇದನ್ನೂ ಓದಿ: ಮೂಢನಂಬಿಕೆಯನ್ನು ಸುಳ್ಳು ಮಾಡಿದ ಯೋಗಿ – ನೋಯ್ಡಾಗೆ ಭೇಟಿ ನೀಡಿದ್ರೂ ಗೆಲುವು!

ಬಿಜೆಪಿ ಈವರೆಗೂ ಉತ್ತರ ಪ್ರದೇಶದಲ್ಲಿ ನಾಲ್ಕು ಸಿಎಂಗಳನ್ನು ಕಂಡಿದೆ. ಯೋಗಿ ಆದಿತ್ಯನಾಥ್ಗೂ ಮುನ್ನ ಕಲ್ಯಾಣ್ ಸಿಂಗ್, ರಾಮ್ ಪ್ರಕಾಶ್ ಗುಪ್ತಾ, ಹಾಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ಮೂವರು ನಾಯಕರು ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತಂದಿಲ್ಲ. ಈ ಫಲಿತಾಂಶ ಮೂಲಕ ಬಿಜೆಪಿಯನ್ನು ಎರಡನೇ ಬಾರಿ ಅಧಿಕಾರಕ್ಕೆ ತಂದ ಮೊದಲ ಸಿಎಂ ಆಗಿದ್ದಾರೆ.
ನೊಯ್ಡಾ ಭೇಟಿ ಬಳಿಕ ಅಧಿಕಾರ ಉಳಿಸಿಕೊಂಡ ಸಿಎಂ
ನೊಯ್ಡಾಗೆ ಭೇಟಿಗೆ ನೀಡಿದ ಮುಖ್ಯಮಂತ್ರಿ ಅಧಿಕಾರ ಕಳೆದುಕೊಳ್ಳುತ್ತಾರೆ ಎನ್ನುವ ನಂಬಿಕೆ ಉತ್ತರ ಪ್ರದೇಶದ ರಾಜಕೀಯದಲ್ಲಿದೆ. ಈ ಕಾರಣಕ್ಕೆ ಹಿಂದೆ ಅಖಿಲೇಶ್ ಯಾದವ್ ಸೇರಿದಂತೆ ಹಲವು ಸಿಎಂಗಳು ನೊಯ್ಡಾಗೆ ತಮ್ಮ ಅಧಿಕಾರದ ಅವಧಿಯಲ್ಲಿ ಭೇಟಿ ನೀಡಿರಲಿಲ್ಲ. ಆದರೆ ಯೋಗಿ ಆದಿತ್ಯನಾಥ್ ತಮ್ಮ ಅವಧಿಯಲ್ಲಿ ಹತ್ತಕ್ಕೂ ಹೆಚ್ಚು ಬಾರಿ ಭೇಟಿ ನೀಡಿದ್ದಾರೆ. ಇದನ್ನೂ ಓದಿ: ಯುಪಿಯಲ್ಲಿ ಯೋಗಿಯಿಂದ ಇತಿಹಾಸ ಸೃಷ್ಟಿ – ಬಿಜೆಪಿ ಗೆದ್ದಿದ್ದು ಹೇಗೆ?

ಮೊದಲ ಬಾರಿ ಅವರು ಮೆಟ್ರೋ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿಯೊಂದಿಗೆ ಭೇಟಿ ನೀಡಿದ್ದರು. ಇದಾದ ಬಳಿಕ ಅಖಿಲೇಶ್ ಯಾದವ್ ಈ ಇಬ್ಬರು ಮುಂದೆ ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು. ಆದರೆ 2019 ರಲ್ಲಿ ಮೋದಿ ಮತ್ತೆ ಅಧಿಕಾರಕ್ಕೆ ಬಂದಿದ್ದರು.
1988 ರ ಜೂನ್ನಲ್ಲಿ ಆಗಿನ ಯುಪಿ ಸಿಎಂ ವೀರ್ ಬಹದ್ದೂರ್ ಸಿಂಗ್ ಅವರು ನೋಯ್ಡಾದಿಂದ ಹಿಂತಿರುಗಿದ ಕೆಲವು ದಿನಗಳ ನಂತರ ಕಚೇರಿಯನ್ನು ತ್ಯಜಿಸಿದ ನಂತರ ನೋಯ್ಡಾ ಜಿಂಕ್ಸ್ ಜನಪ್ರಿಯವಾಯಿತು. ಅಖಿಲೇಶ್ ಯಾದವ್, ಮುಲಾಯಂ ಸಿಂಗ್ ಯಾದವ್, ಕಲ್ಯಾಣ್ ಸಿಂಗ್ ಮತ್ತು ರಾಜನಾಥ್ ಸಿಂಗ್ ಯುಪಿ ಸಿಎಂ ಆಗಿದ್ದಾಗ ನೋಯ್ಡಾಗೆ ಭೇಟಿ ನೀಡಿರಲಿಲ್ಲ.

Leave a Reply