ಉತ್ತರ ಪ್ರದೇಶದಲ್ಲಿ ಮೈತ್ರಿ ಕಡಿದುಕೊಂಡ ಸಿಎಂ ಯೋಗಿ ಆದಿತ್ಯನಾಥ್

ಲಕ್ನೋ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ರಾಜ್ಯಪಾಲರಾದ ರಾಮ್ ನಾಯಕ್ ಅವರಿಗೆ ಪತ್ರ ಬರೆದಿದ್ದು, ತಕ್ಷಣದಿಂದ ಜಾರಿ ಆಗುವಂತೆ ತಮ್ಮ ಸಚಿವ ಸಂಪುಟದಿಂದ ಓಂ ಪ್ರಕಾಶ್ ರಾಜ್ ಭರ್ ಅವರನ್ನು ಕೈ ಬಿಡುತ್ತಿರುವುದಾಗಿ ತಿಳಿಸಿದ್ದಾರೆ.

ಸುಹೇಲ್‍ದೇವ್ ಭಾರತೀಯ ಸಮಾಜ ಪಕ್ಷದ ಅಧ್ಯಕ್ಷ ರಾಜ್ ಭರ್ ಅವರು ಅವರು ಆದಿತ್ಯನಾಥ್ ಅವರ ಸಂಪುಟದಲ್ಲಿ ಹಿಂದುಳಿದ ವರ್ಗಗಳ ಸಚಿವರಾಗಿದ್ದರು. ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರದ ವಿರುದ್ಧವೇ ರೆಬೆಲ್ ಆದ ಒಂದು ದಿನದ ಬಳಿಕ ಸಿಎಂ ಯೋಗಿ ಈ ನಿರ್ಧಾರವನ್ನು ಕೈಗೊಂಡಿದ್ದಾರೆ.

ಮೇ 19 ರಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ರಾಜ್ ಭರ್ ಅವರು ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಕಡಿಮೆ ಸ್ಥಾನ ಲಭಿಸಲಿದೆ. ಎಸ್‍ಪಿ ಹಾಗೂ ಬಿಎಸ್‍ಪಿ ಮೈತ್ರಿಗೆ ಹೆಚ್ಚಿನ ಸ್ಥಾನಗಳಿಸಲಿದೆ. ಬಿಜೆಪಿ ವಿರುದ್ಧ ತಾವು ರೆಬೆಲ್ ಆಗಿರುವುದಕ್ಕೆ ಈ ಫಲಿತಾಂಶ ಬರಲಿದೆ ಎಂದು ಭವಿಷ್ಯ ನುಡಿದಿದ್ದರು.

ಬಿಜೆಪಿ ಚಿಹ್ನೆ ಮೂಲಕ ತಮ್ಮ ಸ್ಪರ್ಧೆಗೆ ಬಿಜೆಪಿ ನಿರಾಕರಿಸಿದ್ದರಿಂದ ಅವರು ಮೈತ್ರಿ ವಿರುದ್ಧ ರೆಬೆಲ್ ಆಗಲು ಕಾರಣವಾಗಿತ್ತು. ಬಿಜೆಪಿ ನಾಯಕರು ರಾಜ್ ಭರ್ ಅವರ ಭಾರತೀಯ ಸಮಾಜ ಪಕ್ಷದ ಚಿಹ್ನೆ ಮೂಲಕವೇ ಸ್ಪರ್ಧೆ ಮಾಡಲು ಸೂಚನೆ ನೀಡಿದ್ದರು. ಇತ್ತ ರಾಜ್ ಭರ್ ಅವರು ತಮ್ಮ ಪಕ್ಷದಿಂದ 40 ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರು. ಕಣಕ್ಕೆ ಇಳಿದ ಎಲ್ಲಾ ಅಭ್ಯರ್ಥಿಗಳು ಒಬಿಸಿ ಅಭ್ಯರ್ಥಿಗಳೇ ಆಗಿದ್ದರು. ಅಲ್ಲದೇ ಕೆಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದರು. ಅಲ್ಲದೇ 2022ರ ಚುನಾವಣೆಗೆ ತಮ್ಮ ಪಕ್ಷವನ್ನು ಸ್ವತಂತ್ರ್ಯವಾಗಿ ಕಣಕ್ಕೆ ಇಳಿಸಲು ಕಾರ್ಯನಿರ್ವಹಿಸುವುದಾಗಿ ಹೇಳಿದ್ದರು.

ಕೊನೆಯ ಹಂತದ ಮತದಾನದ ವೇಳೆ ಸಾರ್ವಜನಿಕವಾಗಿಯೇ ಹೇಳಿಕೆ ನೀಡಿದ್ದ ರಾಜ್ ಭರ್, ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡುವಂತೆಯೂ ಹೇಳಿಕೆ ನೀಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಸಂಬಂಧ ಅವರ ವಿರುದ್ಧ ಪ್ರಕರಣ ಕೂಡ ದಾಖಲಾಗಿದೆ. ಇತ್ತ ಯೋಗಿ ಆದಿತ್ಯನಾಥ್ ಅವರು ನೀಡಿರುವ ಪತ್ರಕ್ಕೆ ಗವರ್ನರ್ ಅವರು ಒಪ್ಪಿಗೆ ನೀಡಿದ್ದು, ಸಚಿವ ಸ್ಥಾನದಿಂದ ಕೈಬಿಟ್ಟಿದ್ದಾರೆ.

Comments

Leave a Reply

Your email address will not be published. Required fields are marked *