ಪೌರತ್ವ ಕಾಯ್ದೆ ವಿರುದ್ಧದ ಪ್ರತಿಭಟನೆಯಲ್ಲಿ ಪೋಷಕರು ಅರೆಸ್ಟ್ – ಮನೆಯಲ್ಲಿ ಅನಾಥವಾಯ್ತು ಮಗು

ಲಕ್ನೋ: ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆಯಲ್ಲಿ ತಂದೆ-ತಾಯಿ ಅರೆಸ್ಟ್ ಆಗಿ ಅವರು 14 ತಿಂಗಳ ಹೆಣ್ಣು ಮಗು ಅನಾಥವಾಗಿರುವ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ.

ಪೌರತ್ವ ವಿಧೇಯಕ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸಿದ ವಾರಣಾಸಿಯ 60 ಜನರನ್ನು ಉತ್ತರ ಪ್ರದೇಶದ ರಾಜ್ಯ ಸರ್ಕಾರ ಕಳೆದ ಗುರುವಾರ ಬಂಧಿಸಿದೆ. ಇವರಲ್ಲಿ ಏಕ್ತಾ ಮತ್ತು ರವಿಶೇಖರ್ ದಂಪತಿಯನ್ನು ಬಂಧಿಸಿದ್ದು, ಅವರಿಗೆ 14 ತಿಂಗಳ ಹಿಂದೆ ಜನಿಸಿದ್ದ ಹೆಣ್ಣು ಮಗು ತಂದೆ ತಾಯಿ ಇಲ್ಲದೇ ಕಷ್ಟಪಡುವಂತೆ ಆಗಿದೆ.

ಪ್ರತಿಭಟನೆ ನಿಷೇಧಿಸಿ 144 ಸೆಕ್ಷನ್ ಹಾಕಿದ್ದರೂ ವಾರಣಾಸಿಯಲ್ಲಿ ಪ್ರತಿಭಟನೆಯನ್ನು ಮಾಡಲಾಗಿತ್ತು. ಈ ಪ್ರತಿಭಟನೆಯಲ್ಲಿ ಭಾಗವಹಿಸಿದ ವಾರಣಾಸಿಯ ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತ ದಂಪತಿ ಏಕ್ತಾ ಮತ್ತು ರವಿಶೇಖರ್ ಅವರನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ. ಈ ದಂಪತಿಗಳು ಹವಾಮಾನ ಅಜೆಂಡಾ ಎಂಬ ಎನ್‍ಜಿಒ ನಡೆಸುತ್ತಿದ್ದು, ಪರಿಸರ ಮಾಲಿನ್ಯದ ಬಗ್ಗೆ ಅರಿವು ಮಾಡಿಸುವ ಕೆಲಸ ಮಾಡುತ್ತಿದ್ದರು.

ಈ ದಂಪತಿ ಡಿಸೆಂಬರ್ 19 ರಂದು ಎಡ ಗುಂಪಿನವರು ಆಯೋಜನೆ ಮಾಡಿದ್ದ ಪೌರತ್ವ ಕಾಯ್ದೆ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಈ ಪ್ರತಿಭಟನೆಯಲ್ಲಿ ಏಕ್ತಾ ಮತ್ತು ರವಿಶೇಖರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪೋಷಕರ ಬಂಧನದ ನಂತರ ಅವರ 14 ತಿಂಗಳ ಮಗಳು ಐರಾ ಅನಾಥವಾಗಿ ಅವರ ಸಬಂಧಿಕರ ಮನೆಯಲ್ಲಿ ಇದ್ದಾಳೆ.

ಈ ವಿಚಾರದ ಬಗ್ಗೆ ಮಾತನಾಡಿರುವ ರವಿಶೇಖರ್ ಅವರ ತಾಯಿ ಶೀಲಾ ತಿವಾರಿ, ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ. ಆದರೆ ಪೊಲೀಸರು ಯಾಕೆ ಅವನನ್ನು ಬಂಧಿಸಿದ್ದಾರೆ? ಅವನು ಶಾಂತಿಯೂತವಾಗಿ ಪ್ರತಿಭಟನೆ ಮಾಡುತ್ತಿದ್ದ. 14 ತಿಂಗಳ ಮಗು ತಾಯಿಯನ್ನು ಬಿಟ್ಟು ಹೇಗೆ ಬದುಕುತ್ತದೆ. ಈ ರೀತಿಯಲ್ಲಿ ನೀವು ಅಪರಾಧವನ್ನು ನಿಯಂತ್ರಿಸುತ್ತೀರಾ? ಎಂದು ರಾಜ್ಯ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.

ಮಗು ಏನನ್ನು ತಿನ್ನುತ್ತಿಲ್ಲ. ಅಪ್ಪ ಅಮ್ಮ ಬೇಕು ಎಂದು ಯಾವಾಗಲೂ ಅಳುತ್ತದೆ. ನಾವು ಅಪ್ಪ ಅಮ್ಮ ಬರುತ್ತಾರೆ ಎಂದು ಸುಳ್ಳು ಹೇಳಿ ಮಗುವಿಗೆ ಊಟ ಮಾಡಿಸುತ್ತಿದ್ದೇವೆ. ನಮಗೆ ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ. ಈ ಮಗುವಿನ ಮುಖ ನೋಡಿಯಾದರೂ ಏಕ್ತಾ ಮತ್ತು ರವಿಶೇಖರ್ ಕೋರ್ಟ್ ಜಾಮೀನು ಮಂಜೂರು ಮಾಡಬೇಕೆಂದು ದಂಪತಿಯ ಸಂಬಂಧಿಕರು ಮನವಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *