ಶಾಲೆಯಿಂದ ಮರಳುತ್ತಿದ್ದ ವಿದ್ಯಾರ್ಥಿನಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು!

– ಪಿಎಸ್‍ಐ ಕನಸು ಕಂಡಿದ್ದ ಬಾಲಕಿ ಕನಸಾಗಿಯೇ ಉಳಿಯಿತು

ಲಕ್ನೋ: ಶಾಲೆ ಮುಗಿಸಿ ಮನೆಗೆ ಮರಳುತ್ತಿದ್ದ 15 ವರ್ಷದ ವಿದ್ಯಾರ್ಥಿನಿಯನ್ನು ತಡೆದು ಬೆಂಕಿ ಹಚ್ಚಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ನುಮೀಲ್ ಗ್ರಾಮದಲ್ಲಿ ನಡೆದಿದ್ದು, ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ.

ನುಮೀಲ್ ಗ್ರಾಮದ ಸಂಜಾಲಿ ಮೃತ ವಿದ್ಯಾರ್ಥಿನಿ. ಸಂಜಾಲಿಯು ಅಶಾರ್ಫಿ ದೇವಿ ಚಿಡ್ಡಾ ಸಿಂಗ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಘಟನೆ ನಡೆದು ನಾಲ್ಕು ದಿನಗಳು ಕಳೆದರೂ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿಲ್ಲ ಎಂದು ವರದಿಯಾಗಿದೆ.

ಘಟನೆಯ ವಿವರ:
ವಿದ್ಯಾರ್ಥಿನಿ ಸಂಜಾಲಿ ಎಂದಿನಂತೆ ಮಂಗಳವಾರ ಶಾಲೆ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದಳು. ಈ ವೇಳೆ ಆಕೆಯನ್ನು ಅಡ್ಡಗಟ್ಟಿದ ಇಬ್ಬರು ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಸುಟ್ಟು ಬಿದ್ದಿದ್ದ ಸಂಜಾಲಿಯನ್ನು ನೋಡಿದ ಕೆಲ ಸ್ಥಳೀಯರು ಆಗ್ರಾದ ಎಸ್‍ಎನ್ ವೈದ್ಯಕೀಯ ಕಾಲೇಜಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರಿಂದ ದೆಹಲಿಯ ಸಫ್ದರ್‍ಜಂಗ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ.

ಸಂಜಾಲಿ ಸಾವಿನಿಂದಾಗಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಯಾವ ಕಾರಣಕ್ಕೆ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎನ್ನುವುದು ನಮಗೆ ಗೊತ್ತಿಲ್ಲ. ದಲಿತರಾಗಿರುವ ನಾವು ನೆರೆಹೊರೆಯವರ ಜೊತೆಗೆ ಜಗಳವಾಡಿಕೊಂಡಿಲ್ಲ, ಯಾರೊಬ್ಬರೊಂದಿಗೂ ವೈರತ್ವ ಹೊಂದಿಲ್ಲ. ನಮ್ಮ ಮಗಳನ್ನು ಕೊಲೆಗೈದ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.

ಐಪಿಎಸ್ ಅಧಿಕಾರಿಯಾಗಬೇಕು ಅಂತ ಸಂಜಾಲಿ ಕನಸು ಕಂಡಿದ್ದಳು. ಆದರೆ ದುಷ್ಕರ್ಮಿಗಳು ಆಕೆಯನ್ನು ಬಲಿಪಡೆದು ಕನಸನ್ನು ಕೊಂದು ಹಾಕಿದರು ಎಂದು ಪೋಷಕರು ಮೃತ ಮಗಳನ್ನು ನೆನೆದು ಕಣ್ಣಿರು ಇಟ್ಟಿದ್ದಾರೆ.

ಉತ್ತರ ಪ್ರದೇಶ ಸರ್ಕಾರವು ಮೃತಳ ಕುಟುಂಬಸ್ಥರಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿದೆ. ಈ ಕುರಿತು ಪ್ರಕರಣ ದಾಖಲಿಸಿದ್ದು, ತನಿಖೆಯನ್ನು ಚುರುಕುಗೊಳಿಸಲಾಗಿದೆ. ಸದ್ಯದಲ್ಲಿಯೇ ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದು ಆಗ್ರಾ ಪೊಲೀಸರು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *