ಹಾವಿನಿಂದ ಕಚ್ಚಿಸಿ ಪತ್ನಿ ಕೊಂದಿದ್ದಾತನಿಗೆ ಡಬಲ್ ಜೀವಾವಧಿ ಶಿಕ್ಷೆ, 5 ಲಕ್ಷ ರೂ. ದಂಡ

ತಿರುವನಂತಪುರಂ: ಕೇರಳದಲ್ಲಿ ಹಾವಿನಿಂದ ಕಚ್ಚಿಸಿ ಪತ್ನಿಯನ್ನ ಕೊಂದಿದ್ದ ಖತರ್ನಾಕ್ ಪತಿಗೆ ಕೊನೆಗೂ ಶಿಕ್ಷೆಯಾಗಿದೆ.

ಯಾರಿಗೂ ಅನುಮಾನ ಬಾರದಂತೆ, ಹಾವಿನಿಂದ ಕಚ್ಚಿಸಿ ಪತ್ನಿ ಉತ್ತರಾಳನ್ನು ಪತಿ ಸೂರಜ್ ಕೊಲೆ ಮಾಡಿದ್ದ. ಈತನ ಮೇಲಿನ ಕೊಲೆ ಆರೋಪ ಸಾಬೀತಾಗಿ ಇಂದಿಗೆ ತೀರ್ಪನ್ನು ಕಾಯ್ದಿರಿಸಲಾಗಿತ್ತು. ಇದೀಗ ಸೂರಜ್‍ಗೆ ಡಬಲ್ ಜೀವಾವಧಿ ಶಿಕ್ಷೆ ವಿಧಿಸಿ ಸೆಷನ್ಸ್ ಕೋರ್ಟ್ ಆದೇಶ ಹೊರಡಿಸಿದೆ. ಜೊತೆಗೆ 5 ಲಕ್ಷ ರೂ. ದಂಡವನ್ನು ವಿಧಿಸಿದೆ.

ಏನಿದು ಪ್ರಕರಣ?:
ಉತ್ತರಾಗೆ 20201 ಫೆಬ್ರವರಿಯಲ್ಲಿ ಹಾವು ಕಚ್ಚಿದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಆಸ್ಪತ್ರೆಯಲ್ಲಿ ಇದ್ದಾಗಲೇ ಅಂದ್ರೆ ಮೇ 7ರಂದು ಎರಡನೇ ಬಾರಿ ಹಾವು ಕಚ್ಚಿತ್ತು. ಆದರೆ ಉತ್ತರಾಳ ಪೋಷಕರು ಅಳಿಯನ ಮೇಲೆ ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು. ಅಷ್ಟೇ ಅಲ್ಲದೆ ಸೂರಜ್ ವರದಕ್ಷಿಣೆಗಾಗಿ ನಮ್ಮ ಮಗಳಿಗೆ ಆಗಾಗ್ಗೆ ಕಿರುಕುಳ ನೀಡುತ್ತಿದ್ದ. ಮದುವೆಯ ಸಮಯದಲ್ಲಿ ನೀಡಿದ್ದ ಕೆಲವು ಆಭರಣಗಳು ಲಾಕರ್ ನಿಂದ ಕಾಣೆಯಾಗಿವೆ ಎಂದು ದೂರಿದ್ದರು.  ಇದನ್ನೂ ಓದಿ: ಆಸ್ತಿಗಾಗಿ ಪತ್ನಿಯನ್ನ ಕೊಂದು ಹಾವಿನ ದ್ವೇಷದ ಕಥೆ ಕಟ್ಟಿದ್ದ ಪತಿ ಅರೆಸ್ಟ್

ಈ ಹಿನ್ನೆಲೆ ತನಿಖೆ ಆರಂಭಿಸಿದ ಪೊಲೀಸರಿಗೆ ಆಘಾತವೇ ಕಾದಿತ್ತು. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೆಲ ಸತ್ಯಗಳು ಬೆಳಕಿಗೆ ಬಂದಿದ್ದವು. ಖಾಸಗಿ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ ಸೂರಜ್ ಕಳೆದ ಐದು ತಿಂಗಳುಗಳಿಂದ ಪತ್ನಿಯ ಕೊಲೆಗೆ ಸಂಚು ರೂಪಿಸಿದ್ದ. ಈ ಕುರಿತು ಇಂಟರ್ನೆಟ್‍ನಲ್ಲಿ ವಿಡಿಯೋ ಕೂಡ ನೋಡಿದ್ದ. ಇದನ್ನೂ ಓದಿ: ಅನ್ಯಧರ್ಮದ ಯುವಕನ ಜೊತೆ ಕಾಣಿಸಿಕೊಂಡಿದ್ದಕ್ಕೆ ಯುವತಿಗೆ ಥಳಿತ

ಸೂರಜ್ 10 ಸಾವಿರ ರೂ. ಪಾವತಿಸಿ ಕೊಲ್ಲಂ ಜಿಲ್ಲೆಯ ಹಾವಾಡಿಗ ಸುರೇಶ್‍ನಿಂದ ಹಾವನ್ನು ಖರೀದಿಸಿದ್ದ. ಬಳಿಕ ತನ್ನ ರೂಮ್‍ನಲ್ಲಿ ಹಾವನ್ನು ಬಿಟ್ಟು ಪತ್ನಿಗೆ ಕಚ್ಚುವಂತೆ ಮಾಡಿದ್ದ. ಮೊದಲ ಬಾರಿಗೆ ಹಾವು ಕಚ್ಚಿದಾಗಲೇ ಪತ್ನಿ ಸಾಯುತ್ತಾಳೆ ಎಂದು ಸೂರಜ್ ತಿಳಿಸಿದ್ದ. ಆದರೆ ಅದೃಷ್ಟವಶಾತ್ ಉತ್ತರ ಬದುಕುಳಿದಿದ್ದಳು. ಅಳಿಯನ ಮೇಲೆ ಆಗಲೇ ಅನುಮಾನ ವ್ಯಕ್ತಪಡಿಸಿದ್ದ ಉತ್ತರಾಳ ಪೋಷಕರು ಮಗಳನ್ನು ತಮ್ಮ ಊರಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತಿದ್ದರು. ಇದನ್ನೂ ಓದಿ: ಮರ್ಯಾದಾ ಹತ್ಯೆ – ಮಗಳು ಪ್ರೀತಿಸಿ ವಿವಾಹವಾಗಿದ್ದಕ್ಕೆ ಇಡೀ ಕುಟುಂಬವನ್ನೇ ಜೀವಂತ ಸುಟ್ಟ ತಂದೆ

ಆರೋಪಿ ಮೇ 6ರಂದು ಮತ್ತೆ ಹಾವಿನಿಂದ ಪತ್ನಿಗೆ ಕಚ್ಚಿಸಿ ಕೊಲೆಗೈದಿದ್ದ. ಅಷ್ಟೇ ಅಲ್ಲದೆ ಹಾವನ್ನು ಕೊಂದು ಒಳ್ಳೆಯವನಂತೆ ನಾಟಕವಾಡಿದ್ದ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಕೃತ್ಯ ಬೆಳಕಿಗೆ ಬಂದಿತ್ತು. ಪತ್ನಿಯನ್ನ ಕೊಂದರೆ ಆಕೆಯ ಹೆಸರಿನಲ್ಲಿದ್ದ ಆಸ್ತಿ ತನಗೆ ಬರುತ್ತದೆ ಎಂದು ಸೂರಜ್ ಕೃತ್ಯ ಎಸೆಗಿದ್ದಾನೆ. ಅಷ್ಟೇ ಅಲ್ಲದೆ ವರದಕ್ಷಿಣೆಗಾಗಿ ಪದೇ ಪದೇ ಕಿರುಕುಳ ನೀಡುತ್ತಿದ್ದ ಎನ್ನುವುದು ವಿಚಾರಣೆ ವೇಳೆ ಸ್ಪಷ್ಟವಾಗಿತ್ತು.

Comments

Leave a Reply

Your email address will not be published. Required fields are marked *