ಮತ್ತೆ ಕೈಕೊಟ್ಟ ಟಾಪ್‌ ಬ್ಯಾಟರ್ಸ್‌ – ಮೊದಲ ದಿನವೇ ಭಾರತ 185ಕ್ಕೆ ಆಲೌಟ್‌; ಆಸೀಸ್‌ 9ಕ್ಕೆ 1 ವಿಕೆಟ್‌

ಸಿಡ್ನಿ: ಬಾರ್ಡರ್‌ ಗವಾಸ್ಕರ್‌ ಟ್ರೋಫಿ (Border Gavaskar Trophy) ಟೆಸ್ಟ್‌ ಸರಣಿಯ ಅಂತಿಮ ಪಂದ್ಯದ ಮೊದಲ ದಿನವೇ ಭಾರತ 185 ರನ್‌ಗಳಿಗೆ ಆಲೌಟ್‌ ಆಗಿದೆ. ಬಳಿಕ ತನ್ನ‌ ಸರದಿಯ ಮೊದಲ ಇನ್ನಿಂಗ್ಸ್‌ ಆರಂಭಿಸಿರುವ ಆಸ್ಟ್ರೇಲಿಯಾ (Australia) ದಿನಾಂತ್ಯಕ್ಕೆ 3 ಓವರ್‌ಗಳಲ್ಲಿ 9 ರನ್‌ಗಳಿಗೆ 1 ವಿಕೆಟ್ ಕಳೆದುಕೊಂಡಿದೆ.

ಸಿಡ್ನಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ-ಆಸೀಸ್‌ (Ind vs Aus) ನಡುವಿನ 5ನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯ ಆರಂಭಗೊಂಡಿದೆ. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿಕೊಂಡ ಟೀಂ ಇಂಡಿಯಾ 72.2 ಓವರ್‌ಗಳಲ್ಲಿ 185 ರನ್‌ಗಳಿಗೆ ಆಲೌಟ್‌ ಆಯಿತು. ಇದನ್ನೂ ಓದಿ: ಭಾರತಕ್ಕೆ ಹೀನಾಯ ಸೋಲು – ಆಸ್ಟ್ರೇಲಿಯಾಗೆ 184 ರನ್‌ಗಳ ಭರ್ಜರಿ ಗೆಲುವು

ಅಗ್ರ ಬ್ಯಾಟರ್‌ಗಳ ವೈಫಲ್ಯ:
ಅಂತಿಮ ಪಂದ್ಯದಲ್ಲೂ ಟೀಂ ಇಂಡಿಯಾದ (Team India) ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಕೈಕೊಟ್ಟರು. ಯಶಸ್ವಿ ಜೈಸ್ವಾಲ್‌, ಕೆ.ಎಲ್‌ ರಾಹುಲ್‌, ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ ಅಲ್ಪಮೊತ್ತಕ್ಕೆ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಪರೇಡ್‌ ನಡೆಸಿದರು. ಮಧ್ಯಮ ಕ್ರಮಾಂಕದಲ್ಲಿ ರಿಷಬ್‌ ಪಂತ್‌, ರವೀಂದ್ರ ಜಡೇಜಾ ಅವರಿಂದ 48 ರನ್‌ಗಳ ಸಣ್ಣ ಜೊತೆಯಾಟ ಬಂದರೂ ಭಾರತ 200 ರನ್‌ಗಳ ಗಡಿ ದಾಟುವಲ್ಲಿ ವಿಫಲವಾಯಿತು.

ಭಾರತದ ಪರ ರಿಷಬ್ ಪಂತ್ 40 ರನ್‌, ರವೀಂದ್ರ ಜಡೇಜಾ 26 ರನ್‌, ಜಸ್ಪ್ರೀತ್ ಬುಮ್ರಾ 22 ರನ್, ಶುಭಮನ್‌ ಗಿಲ್‌ 20 ರನ್‌, ವಿರಾಟ್‌ ಕೊಹ್ಲಿ 17 ರನ್‌, ವಾಷಿಂಗ್ಟನ್‌ ಸುಂದರ್‌ 14 ರನ್‌, ಯಶಸ್ವಿ ಜೈಸ್ವಾಲ್‌ 10 ರನ್‌, ಕೆ.ಎಲ್‌ ರಾಹುಲ್‌ 4 ರನ್‌, ಪ್ರಸಿದ್ಧ್‌ ಕೃಷ್ಣ 3 ರನ್‌, ಸಿರಾಜ್‌ ಅಜೇಯ 3 ರನ್‌ ಗಳಿಸಿದ್ರೆ, ನಿತೀಶ್‌ ರೆಡ್ಡಿ ಶೂನ್ಯ ಸುತ್ತಿದರು. ಇದನ್ನೂ ಓದಿ: ಮನು ಭಾಕರ್‌, ಗುಕೇಶ್‌ ಸೇರಿದಂತೆ ನಾಲ್ವರಿಗೆ ಖೇಲ್‌ ರತ್ನ ಘೋಷಣೆ

ಆರಂಭಿಸಿದ ಆಸೀಸ್‌ ಪರ ಉಸ್ಮಾನ್‌ ಖವಾಜ 2 ರನ್‌ ಗಳಿಸಿ,‌ ದಿನಾಂತ್ಯದ ಕೊನೇ ಎಸೆತದಲ್ಲಿ ಜಸ್ಪ್ರೀತ್‌ ಬುಮ್ರಾಗೆ ವಿಕೆಟ್‌ ಒಪ್ಪಿಸಿದರು. ಇನ್ನೂ ಸ್ಯಾಮ್‌ ಕಾನ್ಸ್‌ಸ್ಟಾಸ್‌ 7 ರನ್‌ ಗಳಿಸಿದ್ದು, 2ನೇ ದಿನಕ್ಕೆ ಕ್ರೀಸ್‌ ಕಾಯ್ದಿರಿಸಿದ್ದಾರೆ.

ಆಸ್ಟ್ರೇಲಿಯಾ ಪರ ವೇಗದ ಬೌಲರ್ ಸ್ಕಾಟ್ ಬೋಲೆಂಡ್ 31 ರನ್ ಗಳಿಗೆ 4 ವಿಕೆಟ್ ಕಿತ್ತರೆ, ಮಿಚೆಲ್ ಸ್ಟಾರ್ಕ್ 49 ರನ್ ಗಳಿಗೆ 3 ವಿಕೆಟ್ ಗಳಿಸಿದರು. ನಾಯಕ ಪ್ಯಾಟ್ ಕಮಿನ್ಸ್ 37 ರನ್ ಗಳಿಗೆ 2 ವಿಕೆಟ್ ಕಬಳಿಸಿದರು. ಉಳಿದೊಂದು ವಿಕೆಟ್ ಸ್ಪಿನ್ನರ್ ನಥಾನ್‌ ಲಿಯೋನ್ ಪಾಲಾಯಿತು. ಇದನ್ನೂ ಓದಿ: ಸಿಡ್ನಿ ಪಂದ್ಯದಿಂದ ರೋಹಿತ್‌ ಔಟ್‌? – ಗೌತಮ್‌ ಗಂಭೀರ್‌ ಹೇಳಿದ್ದೇನು?