ಲಿಂಕನ್ ಹೇಳಿಕೆ ಬಳಸಿ ಎಚ್‍ಡಿಕೆಗೆ ಬಿಎಸ್‍ವೈ ಟಾಂಗ್

ಬೆಂಗಳೂರು: ಅಮೆರಿಕದ ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರ ಹೇಳಿಕೆಯನ್ನು ಬಳಸಿ ಮಾಜಿ ಸಿಎಂ ಯಡಿಯೂರಪ್ಪನವರು ಸಿಎಂ ಎಚ್‍ಡಿ ಕುಮಾರಸ್ವಾಮಿಯವರಿಗೆ ಟಾಂಗ್ ಕೊಟ್ಟಿದ್ದಾರೆ.

ಭಾನುವಾರ ಕುಮಾರಸ್ವಾಮಿಯವರು ಮಾಧ್ಯಮಗಳ ಜೊತೆ ಮಾತನಾಡುವ ವೇಳೆ ನಾನು ನಾಡಿನ ಜನತೆಯ ಮುಲಾಜಿನಲ್ಲಿ ಇಲ್ಲ, ಕಾಂಗ್ರೆಸ್ ಮುಲಾಜಿನಲ್ಲಿದ್ದೇನೆ ಎಂದು ಹೇಳಿದ್ದರು. ಈ ಹೇಳಿಕೆಗೆ ಬಿಎಸ್‍ವೈ ಟಿಟ್ಟರ್ ನಲ್ಲಿ ಲಿಂಕನ್ ಹೇಳಿಕೆಯನ್ನು ಬಳಸಿ ಎಚ್‍ಡಿಕೆಯ ಕಾಲೆಳಿದ್ದಾರೆ.

ಮನುಷ್ಯನ ನಿಜವಾದ ವ್ಯಕ್ತಿತ್ವ ಪರೀಕ್ಷಿಸಬೇಕೆಂದರೆ ಅವನಿಗೆ ಅಧಿಕಾರ ಕೊಟ್ಟು ನೋಡಿ ಎಂದು ಅಬ್ರಹಾಂ ಲಿಂಕನ್ ಹೇಳಿದ್ದರು. ಕುಮಾರಸ್ವಾಮಿಯವರು ತಾನು ಬದುಕಬೇಕಿದ್ದರೆ ತನಗೆ ಅಧಿಕಾರ ಕೊಡಿ ಎಂದು ಕೇಳಿದ್ದು ನಾಡಿನ ಜನತೆ ಮುಂದೆ. ಅಧಿಕಾರ ಸಿಕ್ಕ ಮೇಲೆ ತಾನು ನಾಡಿನ ಜನತೆ ಮುಲಾಜಿನಲ್ಲಿ ಇಲ್ಲ, ಕಾಂಗ್ರೆಸ್ ಮುಲಾಜಿನಲ್ಲಿದ್ದೀನಿ ಎನ್ನುವಾಗ ಲಿಂಕನ್ ನೆನಪಾದರು ಎಂದು ಬಿಎಸ್‍ವೈ ಬರೆದುಕೊಂಡಿದ್ದಾರೆ.

ಇದು ನನ್ನ ಸ್ವತಂತ್ರ ಸರ್ಕಾರ ಅಲ್ಲ, ನಾನು ನಿಮ್ಮ ಮುಲಾಜಿನಲ್ಲಿಯೇ ಕೆಲಸ ಮಾಡಲು ಅವಕಾಶ ಮಾಡಿಕೊಡಿ ಎಂದು ಜನತೆಗೆ ಕೇಳಿ ಕೊಂಡಿದ್ದೆ. ಆದರೆ ಜನತೆ ತಿರಸ್ಕಾರ ಮಾಡಿದ್ದರು. ರೈತರ ಸಾಲಮನ್ನಾ ಮಾಡಿ, ಇಲ್ಲದಿದ್ದರೇ ರಾಜೀನಾಮೆ ನೀಡಿ ಎಂದು ಯಾರು ಒತ್ತಾಯ ಮಾಡುವ ಅಗತ್ಯವಿಲ್ಲ. ಮಾತಿಗೆ ತಪ್ಪಿನಡೆದರೆ ನಾನೇ ರಾಜೀನಾಮೆ ನೀಡುತ್ತೇನೆ. ನನಗೆ ಸ್ವತಂತ್ರ ಬೆಂಬಲವಿಲ್ಲ, ಹೀಗಾಗಿ ಕಾಂಗ್ರೆಸ್ ಪಕ್ಷದ ಮುಲಾಜಿನಲ್ಲಿ ಇರುವೆ, ಸಾಲಮನ್ನಾ ಕುರಿತು ಚರ್ಚೆ ಮಾಡಲಾಗುತ್ತಿದೆ. ಒಂದು ವಾರ ಕಾಲಾವಕಾಶ ನೀಡಿ, ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಮನವಿ ಎಚ್‍ಡಿಕೆ ಮನವಿ ಮಾಡಿದ್ದರು.

Comments

Leave a Reply

Your email address will not be published. Required fields are marked *