ಮುಂಬೈ ಉಗ್ರರ ವಿರುದ್ಧ ಆಪರೇಷನ್‌ಗೆ ಯುಪಿಎ ಅಡ್ಡಿ – ಚಿದಂಬರಂ ಹೇಳಿಕೆ, ಸೋನಿಯ ವಿರುದ್ಧ ಬಿಜೆಪಿ ಕೆಂಡ

ಮುಂಬೈ: 2008ರ ಮುಂಬೈನ ತಾಜ್‌ ಹೋಟೆಲ್ (2008 Mumbai Attacks) ಮೇಲೆ ನಡೆದ ಭಯೋತ್ಪಾದನಾ ದಾಳಿಗೆ ಸಂಬಧಿಸಿದಂತೆ ಮಾಜಿ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ (P Chidambaram) ರಹಸ್ಯವೊಂದನ್ನು ಬಟ್ಟಬಯಲು ಮಾಡಿದ್ದು ಸಂಚಲನ ಮೂಡಿಸಿದೆ.

166 ಜನರ ಹತ್ಯೆ ನಂತರ ಪಾಕಿಸ್ತಾನದಲ್ಲಿ (Pakistan) ಲಷ್ಕರ್ -ಇ-ತೋಯ್ಬಾ ಉಗ್ರರ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಸಲು ನಾನು ಮುಂದಾಗಿದ್ದೆ. ಆದರೆ ಅದಕ್ಕೆ ಯುಪಿಎ ಸರ್ಕಾರ ಅಡ್ಡಗಾಲು ಹಾಕಿತ್ತು ಅಂತ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಿರೋಧ ಹಾಗೂ ಅಮೆರಿಕದ (USA) ಒತ್ತಡದಿಂದ ಅಂದಿನ ಯುಪಿಎ ಸರ್ಕಾರ (UPA Government) ರಾಜತಾಂತ್ರಿಕ ಮಾರ್ಗವನ್ನು ಆಯ್ಕೆ ಮಾಡಿಕೊಂಡಿತು ಎಂಬ ಸ್ಫೋಟಕ ವಿಚಾರವನ್ನ ಹೊರಹಾಕಿದ್ದಾರೆ. ಇದನ್ನೂ ಓದಿ:  ಪಾಕಿಸ್ತಾನದಲ್ಲಿ ಬಾಂಬ್‌ ದಾಳಿ – ಕನಿಷ್ಠ 10 ಜನ ಸಾವು

ಚಿದಂಬರಂ ಹೇಳಿಕೆ ಹೊರಬೀಳುತ್ತಿದ್ದಂತೆಯೇ ಬಿಜೆಪಿ ಕೆಂಡಕಾರಿದ್ದು, ಅಂದಿನ ಯುಪಿಎ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದೆ. ಈ ಕುರಿತು ಸಾಮಾಜಿಕ ಜಾಲತಾಣದ ಪೋಸ್ಟ್ ಮಾಡಿರುವ ಬಿಜೆಪಿ ನಾಯಕ ಶೆಹಜಾದ್ ಪೂನಾವಾಲಾ, ಪಾಕಿಸ್ತಾನ ವಿರುದ್ಧ ಪ್ರತೀಕಾರಕ್ಕೆ ಮುಂದಾಗಿದ್ದ ಚಿದಂಬರಂ ಅವರನ್ನು ಸೋನಿಯಾ ಗಾಂಧಿ ಅಥವಾ ಮನಮೋಹನ್ ಸಿಂಗ್ ಅವರು ತಡೆದರೇ ಎಂದು ಪ್ರಶ್ನಿಸಿದ್ದಾರೆ.

ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿ ಮುಂಬೈ ದಾಳಿಯನ್ನು ವಿದೇಶಿ ಶಕ್ತಿಗಳ ಒತ್ತಡದಿಂದಾಗಿ ದುರುಪಯೋಗಪಡಿಸಿಕೊಳ್ಳಲಾಗಿದೆ ಅಂತ ಮಾಜಿ ಗೃಹ ಸಚಿವರು ಒಪ್ಪಿಕೊಂಡಿದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ.