ನ್ಯೂಯಾರ್ಕ್: ಮೈದಾನದಲ್ಲಿಯೇ ಮೇಲುಡುಗೆ ಸರಿ ಮಾಡಿಕೊಂಡು ಫ್ರೆಂಚ್ ಟೆನ್ನಿಸ್ ತಾರೆಗೆ ಅಂಪೈರ್ ಶಿಕ್ಷೆ ವಿಧಿಸಿದ ಕ್ರಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಅಲೈಜ್ ಕಾರ್ನೆಟ್ ಶಿಕ್ಷೆಗೆ ಗುರಿಯಾದ ಫ್ರೆಂಚ್ ಟೆನ್ನಿಸ್ ಆಟಗಾರ್ತಿ. ಮಂಗಳವಾರ ಸ್ವಿಡಿಶ್ ಜೋಹನಾ ಲಾರ್ಸನ್ ಎದುರು ಆಡುತ್ತಿರುವ ವೇಳೆ ಈ ಘಟನೆ ನಡೆದಿದೆ. ಪಂದ್ಯದ ಎರಡು ಸುತ್ತುಗಳ ಬಳಿಕ ವಿಶ್ರಾಂತಿಗಾಗಿ 10 ನಿಮಿಷ ಸಮಯಾವಕಾಶ ನೀಡಲಾಗಿತ್ತು. 10 ನಿಮಿಷದ ಬಳಿಕ ಮೈದಾನಕ್ಕೆ ಪ್ರವೇಶಿಸಿದ ಅಲೈಜ್ ರಿಗೆ ಮೇಲುಡುಗೆ(ಟಾಪ್)ಯನ್ನು ತಿರುವು-ಮುರುವಾಗಿ ಧರಿಸಿದ್ದು ಗೊತ್ತಾಗಿದೆ.

ಮತ್ತೆ ಡ್ರೆಸ್ ಚೇಂಜ್ ಮಾಡಲು ರೂಮಿಗೆ ತೆರಳಿದ್ರೆ ಸಮಯ ವ್ಯರ್ಥ ಎಂದು ಅರಿತ ಅಲೈಜ್ ಕ್ಯಾಮೆರಾಗಳಿಗೆ ಬೆನ್ನು ಮಾಡಿ ಟಾಪ್ ತೆಗೆದು, ಸರಿಮಾಡಿಕೊಂಡು ಧರಿಸಿದ್ದಾರೆ. ಕೇವಲ 10 ಸೆಕೆಂಡ್ ಗಳಲ್ಲಿ ಅಲೈಜ್ ತಮ್ಮ ಟಾಪ್ ಸರಿಮಾಡಿಕೊಂಡಿದ್ದಾರೆ. ಈ ವೇಳೆ ಕಪ್ಪು ಬಣ್ಣದ ಒಳಉಡುಪು ಕಾಣಿಸಿದ್ದರಿಂದ ಅಂಪೈರ್ ನಿಯಮ ಉಲ್ಲಂಘನೆಯ ಶಿಕ್ಷೆಯನ್ನು ಅಲೈಜಾರಿಗೆ ವಿಧಿಸಿದ್ದಾರೆ.
ಮೈದಾನದಲ್ಲಿದ್ದ ಚೇರ್ ಅಂಪೈರ್ ಕ್ರಿಶ್ಚಿಯನ್ ರಾಸ್ಕ್, ವಿಶ್ವದ 31ನೇ ಶ್ರೇಯಾಂಕಿತೆ ಫ್ರೆಂಚ್ ಆಟಗಾರ್ತಿ ಅಲೈಜ್ ಅಂಗಳದಲ್ಲಿ ಟಾಪ್ ಬದಲಿಸಿಕೊಳ್ಳುವದರ ಮೂಲಕ ಡಬ್ಲ್ಯೂಟಿಎ (Women’s Tennis Association) ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಶಿಕ್ಷೆ ವಿಧಿಸಿದ್ದಾರೆ. ಆದರೆ ಪುರುಷರು ಅಂಗಳದಲ್ಲಿ ಉಡುಪು ತೆಗೆದರೆ ಯಾವುದೇ ಶಿಕ್ಷೆಗಳಿಲ್ಲ.

ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ಹಿರಿಯ ಟೆನ್ನಿಸ್ ತಾರೆಗಳು ಅಲೈಜ್ ಪರವಾಗಿ ನಿಂತಿದ್ದಾರೆ. ಈ ಸಂಬಂಧ ಟ್ವಿಟ್ಟರ್ ನಲ್ಲಿ ಪುರುಷರು ತಮ್ಮ ಬಟ್ಟೆಯನ್ನು ತೆಗೆದು ಓಡಾಡುತ್ತಾರೆ. ಅವರಿಗಿಲ್ಲದ ಈ ನಿಯಮ ಮಹಿಳೆಯರಿಗೆ ಮಾತ್ರ ಏಕೆ ಎಂದು ಕೆಲವರು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ಇದೊಂದು ಮೂರ್ಖತನದ ನಿಯಮವಾಗಿದ್ದು, ಕೂಡಲೇ ಬದಲಾವಣೆ ಆಗಬೇಕಿದೆ. ಈ ನಿಯಮದ ಮೂಲಕ ಲಿಂಗ ಭೇದ ತಾರತಮ್ಯ ಮಾಡಲಾಗ್ತಿದೆ ಎಂದು ಕಿಡಿಕಾರಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply